ಜಿಲ್ಲೆ

ಕರ್ನಾಟಕ ಜಾನಪದ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿಗಳು ಪ್ರಕಟ

ಪಂಕಜ ಕೆ.ಎಂ.

ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ನೀಡಲಾಗುವ 2024ನೇ ಸಾಲಿನ ‘ಜಾನಪದ ತಜ್ಞ ಪ್ರಶಸ್ತಿ’ ಹಾಗೂ ‘ವಾರ್ಷಿಕ ಗೌರವ ಪ್ರಶಸ್ತಿ’ ಪ್ರಕಟಗೊಂಡಿದ್ದು, ಡಾ. ಜೀ.ಶಂ.ಪ ತಜ್ಞ ಪ್ರಶಸ್ತಿಗೆ ಮೈಸೂರಿನ ಡಾ. ಮೈಲಹಳ್ಳಿ ರೇವಣ್ಣ ಹಾಗೂ ಡಾ. ಬಿ. ಎಸ್. ಗದ್ದಗಿಮಠ ತಜ್ಞ ಪ್ರಶಸ್ತಿಗೆ ವಿಜಯನಗರದ ಡಾ. ವೆಂಕಟೇಶ ಇಂದ್ವಾಡಿ ಅವರು ಭಾಜನರಾಗಿದ್ದಾರೆ.

ಜಾನಪದ ತಜ್ಞ ಪ್ರಶಸ್ತಿಯು ತಲಾ 50 ಸಾವಿರ, ವಾರ್ಷಿಕ ಗೌರವ ಪ್ರಶಸ್ತಿಯು ತಲಾ 25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಬೀದರ್‌ನಲ್ಲಿ ಮಾ. 15ರಂದು ಜಿಲ್ಲಾ ರಂಗ ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 2023 ಹಾಗೂ 2024 ಎರಡೂ ಸಾಲಿನ ಪ್ರಶಸ್ತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಪ್ರದಾನ ಮಾಡಲಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ:

ಬೆಂಗಳೂರು ನಗರದ ಡಾ. ಜೋಗಿಲ ಸಿದ್ಧರಾಜು (ಜಾನಪದ ಗಾಯನ), ಬೆಂ.ಗ್ರಾಮಾಂತರ ಜಿಲ್ಲೆಯ ಸಿ.ಎಚ್. ಸಿದ್ದಯ್ಯ (ತತ್ವಪದ ಮತ್ತು ಗೀಗೀ ಪದ), ರಾಮನಗರದ ಎಂ. ಮಹೇಶ್ (ಡೊಳ್ಳು ಕುಣಿತ), ಕೋಲಾರದ ಸುನಂದಮ್ಮ (ಕೋಲಾಟ), ಚಿಕ್ಕಬಳ್ಳಾಪುರದ ವೆಂಕಟರಮಣಪ್ಪ (ಅರೆವಾದ್ಯ, ತಮಟೆ), ತುಮಕೂರಿನ ಸಿದ್ದಪ್ಪ (ಕಿನ್ನರಿ ಜೋಗಿ), ದಾವಣಗೆರೆಯ ಮಾರ್ತಾಂಡಪ್ಪ (ಭಜನೆ), ಚಿತ್ರದುರ್ಗದ ಎ. ಶ್ರೀನಿವಾಸ (ಹಗಲು ವೇಷ), ಶಿವಮೊಗ್ಗದ ಗೌರಮ್ಮ (ಹಸೆ ಚಿತ್ತಾರ), ಮೈಸೂರಿನ ಸಿ. ಮಂಜುನಾಥ (ಚರ್ಮವಾದ್ಯ ನಗಾರಿ), ಮಂಡ್ಯದ ಹುರುಗಲವಾಡಿ ರಾಮಯ್ಯ (ಜಾನಪದ ಗಾಯನ), ಹಾಸನದ ಬಿ.ಟಿ. ಮಾನವ (ಕೋಲಾಟ), ಚಿಕ್ಕಮಗಳೂರಿನ ಬಿ.ಪಿ. ಪರಮೇಶ್ವರಪ್ಪ (ಭಜನೆ), ಚಾಮರಾಜನಗರದ ಆರ್. ಸಿದ್ಧರಾಜು (ತಂಬೂರಿ ಪದ), ದಕ್ಷಿಣ ಕನ್ನಡದ ಜಯಂತಿ (ಪಾಡ್ದನ್) ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಉಡುಪಿಯ ಎನ್. ಗಣೇಶ್ ಗಂಗೊಳ್ಳಿ (ಜಾನಪದ ಗಾಯನ), ಕೊಡಗಿನ ಎಸ್.ಆರ್. ಸರೋಜ (ಬುಡಕಟ್ಟು ಕೋಲಾಟ, ಜೇನು ಕೊಯ್ಯುವ ಹಾಡು ಮತ್ತು ನೃತ್ಯ), ಬೆಳಗಾವಿಯ ಕಮಲಾ ಮರಗನ್ನವರ (ಚೌಡಕಿ ಪದ), ಧಾರವಾಡದ ಪ್ರಭು ಬಸಪ್ಪ ಕುಂದರಗಿ (ಜಾನಪದ ಸಂಗೀತ), ವಿಜಯಪುರದ ಸೋಮಣ್ಣ ದುಂಡಪ್ಪ ಧನಗೊಂಡ (ಡೊಳ್ಳು ಕುಣಿತ), ಬಾಗಲಕೋಟೆಯ ಗಂಗಪ್ಪ ಮ. ಕರಡಿ (ಕರಡಿ ಮಜಲು), ಉತ್ತರ ಕನ್ನಡದ ಗಣಪು ಬಡವಾ ಗೌಡ (ಹಾಲಕ್ಕಿ ಸುಗ್ಗಿ ಕುಣಿತ), ಹಾವೇರಿಯ ಗಿರಿಜವ್ವ ಹನುಮಪ್ಪ ಬಣಕಾರ (ಸಂಪ್ರದಾಯದ ಪದ, ಸೋಬಾನೆ ಪದ), ಗದಗದ ಡಾ. ಗೋವಿಂದಪ್ಪ ರಾಮಚಂದ್ರಪ್ಪ (ಹಗಲು ವೇಷ), ಕಲಬುರಗಿಯ ಬೋರಮ್ಮ (ತತ್ವಪದ), ಬೀದರ್‌ನ ಮಾರುತಿ ಕೋಳಿ (ಜನಪದ ಗಾಯನ), ರಾಯಚೂರಿನ ಯಲ್ಲಮ್ಮ (ತತ್ವಪದ), ಕೊಪ್ಪಳದ ಎಚ್. ಚಂದ್ರಶೇಖರ ಹಡಪದ (ಭಜನೆ), ಬಳ್ಳಾರಿಯ ಕೆ. ಶಂಕರಪ್ಪ (ಹಗಲು ವೇಷ) ಹಾಗೂ ಯಾದಗಿರಿಯ ಗೋಪಣ್ಣ (ತತ್ವಪದ/ಭಜನೆ) ಪ್ರಶಸ್ತಿಗೆ ಭಾಜನರಾಗಿದ್ದಾರೆ.