ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(ಕೆಪಿಸಿಎಲ್)ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶ್ರೀ ನೇಮಕಾತಿ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆಪಿಸಿಎಲ್ನ 56ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯ ಈಗ ಸ್ವಾವಲಂಭಿಯಾಗಿದ್ದು, ಪವನ, ಸೌರ, ಉಷ್ಣ, ಜಲ ವಿದ್ಯುತ್ ಉತ್ಪಾದನೆ ಜತೆಗೆ ತ್ಯಾಜ್ಯದಿಂದಲೂ ವಿದ್ಯುತ್ ಉತ್ಪಾದನೆ ಮಾಡುತ್ತಾ ದೇಶದಲ್ಲೇ ಪ್ರಮುಖ ಸ್ಥಾನದಲ್ಲಿದ್ದು ಸ್ವಾವಲಂಬನೆ ಸಾಧಿಸಿದ್ದೇವೆ. 60 ಸಾವಿರ ಮೆ.ವ್ಯಾ ಉತ್ಪಾದನೆ ಮಾಡುವ ಗುರಿ ಎಡೆಗೆ ನಾವು ಸಾಗುತ್ತಿದ್ದೇವೆ ಎಂದರು.
ಸದ್ಯ ರಾಜ್ಯದಲ್ಲಿ ವಿದ್ಯುತ್ ಇಲ್ಲದ ಗ್ರಾಮವೇ ಇಲ್ಲ. 746 ಮೆಗಾ ವ್ಯಾಟ್ ಉತ್ಪಾದನೆಯಿಂದ ಪ್ರಾರಂಭಗೊಂಡು ಇದೀಗ 9120 ಮೆಗಾ ವ್ಯಾಟ್ ವರೆಗೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿರುವುದು ಕೆಪಿಸಿಎಲ್ನ ಸಾಧನೆಯಾಗಿದೆ. ಇದಕ್ಕೆ ಈ ಸಂಸ್ಥೆಯ ಎಲ್ಲ ಅಧಿಕಾರಿ, ಸಿಬ್ಬಂದಿ ವರ್ಗದ ಶ್ರಮ ಕಾರಣ ಎಂದು ಶ್ಲಾನೆ ಮಾಡಿದರು.
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ರೈತರು ಸುಖವಾಗಿದ್ದರೆ ರಾಜ್ಯವು ಸುಭೀಕ್ಷವಾಗಿರುತ್ತದೆ. ನಮ್ಮ ಸರ್ಕಾರ ಬಂದ ಬಳಿಕ ರೈತರ ಪಂಪ್ಸೆಟ್ಗಿಳಿಗೆ 7 ಗಂಟೆ ವಿದ್ಯುತ್ ನೀಡಿದ್ದೇವೆ. ಜತೆಗೆ ಸಬ್ಸಿಡಿಯನ್ನೂ ನೀಡಿದ್ದೇವೆ. 2035ರ ವೇಳೆಗೆ 35 ಸಾವಿರಕ್ಕೂ ಅಧಿಕ ವಿದ್ಯುತ್ ಉತ್ಪಾದನಾ ಸಮಾರ್ಥ್ಯ ಹೆಚ್ಚಿಸುವುದು ನಮ್ಮ ಉದ್ದೇಶ. ಈಗಾಗಲೇ ಶರಾವತಿಯಲ್ಲಿ ಪಂಪ್ ಸ್ಟೋರೇಜ್ ಯೋಜನೆಗಳನ್ನು ಹಾಕಿದ್ದು, ವಿದ್ಯುತ್ ಕೊರತೆ ಇರುವ ಸಂದರ್ಭಗಳಲ್ಲಿ ಇದು ಉಪಯೋಗಕ್ಕೆ ಬರಲಿದೆ ಎಂದರು.
ಇಂಧನ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಒತ್ತು ನೀಡುತ್ತಿದ್ದೇವೆ. ಈ ಬಾರಿ ಉತ್ತಮ ಮಳೆಯಿಂದಾಗಿ ಜಲ ವಿದ್ಯುತ್ ಉತ್ಪಾದನೆ ಅಧಿಕವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 25 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿದ ಉದ್ಯೋಗಿಗಳನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕಗಳಿಸಿದ ಸಂಸ್ಥೆಯ ಉದ್ಯೋಗಿಗಳ ಮಕ್ಕಳಿಗೆ 3 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಕೆಪಿಸಿಎಲ್ ಹಣಕಾಸು ನಿರ್ದೇಶಕ ಸಿ.ಆರ್.ನಾಗರಾಜ್, ತಾಂತ್ರಿಕ ನಿರ್ದೇಶಕ ಎಸ್.ಕೃಷ್ಣಮೂರ್ತಿ ಮತ್ತಿತರರು ಇದ್ದರು.
ನಾವು ಓದುವಾಗ ಊರಲ್ಲಿ ಕರೆಂಟ್ ಇರಲಿಲ್ಲ. ಸೀಮೆಎಣ್ಣೆ ದೀಪದಲ್ಲಿ ಓದಿ ಮೇಲೆ ಬಂದೆವು. ನಾನು 8ನೇ ತರಗತಿಗೆ ಬಂದಾಗ ಊರಿಗೆ ಕರೆಂಟ್ ಬಂತು. ಈಗ ವರ್ಷಕ್ಕೆ 20 ಸಾವಿರ ಕೋಟಿ ರೂಪಾಯಿ ಪಂಪ್ಸೆಟ್ ಸಬ್ಸಿಡಿ ಹಣವನ್ನು ರೈತರ ಪರವಾಗಿ ಸರ್ಕಾರ ಕೊಡುತ್ತಿದೆ. ಕೆಪಿಸಿಎಲ್ ನೌಕರರ ಶ್ರಮದಿಂದ ವಿದ್ಯುತ್ ರೈತರಿಗೆ ತಲುಪುತ್ತಿದೆ. ಸಮಾಜದಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ ಇದೆ. ಇದು ಹೋಗಬೇಕಾದರೆ ಎಲ್ಲರಿಗೂ ಆರ್ಥಿಕ ಶಕ್ತಿ ಬರಬೇಕು. ನಮಗೆ ಶಿಕ್ಷಣ ಸಿಕ್ಕ ಮೇಲೆ ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಬೇಕು. ಶಿಕ್ಷಣ ಕಲಿತವರೂ ಜಾತಿವಾದಿಗಳಾಗಿ, ದ್ವೇಷವಾದಿಗಳಾಗುತ್ತಿರುವುದು ವಿಷಾದನೀಯ. > ಸಿದ್ದರಾಮಯ್ಯ, ಮುಖ್ಯಮಂತ್ರಿ