ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕವು ಸಾಂಸ್ಕೃತಿಕವಾಗಿ ವಿಶ್ವಮಾನ್ಯತೆ ಪಡೆದ ರಾಜ್ಯ. ಅದು ಸಹಸ್ರಾರು ವರ್ಷಗಳಿಂದ ತನ್ನದೇ ಆದ ಸ್ವಂತಿಕೆ ಉಳಿಸಿಕೊಂಡು ಬಂದದ್ದು ವೈಭವದ ಪರಾಕಾಷ್ಟತೆಗೆ ಸಾಕ್ಷಿಯಾಗಿದೆ ಎಂದು ಪ್ರಾಧ್ಯಾಪಕ ಡಾ. ಗಿರೀಶ ದೇಸೂರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕರ್ನಾಟಕ ಸಂಭ್ರಮ-50 ನಿಮಿತ್ತ ಗುರುವಾರ ಆಯೋಜಿಸಿದ್ದ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಉಜ್ವಲವಾದದ್ದು. ನಾಡಿನಲ್ಲಿ ಅನೇಕ ವೈವಿಧ್ಯತೆಗಳಿದ್ದರೂ ಕನ್ನಡಿಗರು ಬಹುಕಾಲದಿಂದ ಉದಾರತೆ, ತ್ಯಾಗ, ಧರ್ಮಸಮನ್ವಯತೆ, ಆದರ್ಶ ಗುಣಸ್ವಭಾವ ಬೆಳೆಸಿಕೊಂಡು ಬಂದದ್ದನ್ನು ಶಾಸನಗಳಿಂದ ತಿಳಿಯಬಹುದು. ಕನ್ನಡ ಸಾಹಿತ್ಯ ಉಜ್ವಲ ಸಾಹಿತ್ಯವಾಗಿದ್ದು ಕನ್ನಡಪರ ಕಾಳಜಿ ಹೊಂದಿದೆ. ಅದರಲ್ಲೂ ವಚನ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ನೀಡಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಜಿ. ಜಿ. ಬೆಟಗೇರಿ ಮಾತನಾಡಿದರು. ರಾಜೇಂದ್ರಕುಮಾರ ಅಧ್ಯಕ್ಷತೆ ವಹಿಸಿದ್ದರು. ಹರ್ಲಾಪುರದ ಯುವಜನ ಹಾಗೂ ಸಾಂಸ್ಕೃತಿಕ ಸಂಘದವರು ನಾಡು, ನುಡಿಯ ಬಗ್ಗೆ ಜಾಗೃತ ಗೀತೆಗಳನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳೊಂದಿಗೆ ನಾಡು-ನುಡಿ ಬಗ್ಗೆ ಸಂವಾದ ಜರುಗಿತು.
ಗುರು ಹಿರೇಮಠ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಶ್ರೀಶೈಲಗೌಡ ಕಮತರ ವಂದಿಸಿದರು.