ಬೆಂಗಳೂರು: ರಸ್ತೆಯಲ್ಲಿ, ಫುಟ್ಪಾತ್ನಲ್ಲಿ ಓಡಾಡಬೇಕಾದರೆ ಕೇಬಲ್ಗಳು, ಎಲೆಕ್ಟ್ರಿಕ್ ವೈರ್ಗಳು ಮುಖಕ್ಕೆ ತಾಗುವುದು ಜನರಿಗೆ ಹೊಸತೇನಲ್ಲ. ಈ ಬಗ್ಗೆ ನಾಗರೀಕರು ದೂರು ಸಲ್ಲಿಸಿದರೂ ಸ್ಥಳೀಯ ಸಂಸ್ಥೆಗಳು ನಿರ್ಲಕ್ಷ್ಯ ವಹಿಸುತ್ತಲೇ ಬಂದಿವೆ. ಇದೀಗ ಕರ್ನಾಟಕ ಹೈಕೋರ್ಟ್ ನಾಗರೀಕರ ಈ ಸಮಸ್ಯೆಗೆ ಪರಿಹಾರ ಒದಗಿಸಲು ಮುಂದಾಗಿದೆ. ಬೆಂಗಳೂರಿನಲ್ಲಿ ಕೇಬಲ್ಗಳನ್ನು ಜೋತುಬಿಟ್ಟಿರುವ ಖಾಸಗಿ ಇಂಟರ್ನೆಟ್, ಟಿವಿ ಮತ್ತು ಕೇಬಲ್ ಆಪರೇಟರ್ಗಳ ವಿರುದ್ಧ ಕಾನೂನುರೀತ್ಯ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿಗೆ ಕೋರ್ಟ್ ನಿರ್ದೇಶಿಸಿದೆ.
ಬೆಂಗಳೂರಿನ ವಕೀಲರಾದ ಎನ್.ಪಿ.ಅಮೃತೇಶ್ ಅವರು ಕಾನೂನುಬಾಹಿರವಾಗಿ ರಸ್ತೆಗಳಲ್ಲಿ, ರಸ್ತೆಬದಿಗಳಲ್ಲಿ ತೂಗಾಡುತ್ತಿರುವ ಕೇಬಲ್ ಟಿವಿ, ಇಂಟರ್ನೆಟ್ ಅಥವಾ ಎಲೆಕ್ಟ್ರಿಕ್ ವೈರ್ಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಇಂಥ ತೂಗಾಡುವ ಕೇಬಲ್, ವೈರ್ಗಳ ಫೋಟೋಗಳನ್ನು ಲಗತ್ತಿಸಿ, ಈ ಬಗ್ಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ಕೋರಿದ್ದಾರೆ.
ಈ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್.ಎಸ್.ಮಗದುಮ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, "ತೂಗಾಡುತ್ತಿರುವ ಎಲೆಕ್ಟ್ರಿಕ್ ವೈರುಗಳು, ಟೆಲಿಫೋನ್ ಮತ್ತು ಟಿವಿ ಕೇಬಲ್ಗಳು ಭಾರತದ ಎಲ್ಲ ನಗರಗಳಲ್ಲೂ ಸಾಮಾನ್ಯ ದೃಶ್ಯವಾಗಿಬಿಟ್ಟಿದೆ" ಎಂದು ಉದ್ಗರಿಸಿತು.
"ಫೋಟೋಗಳನ್ನು ನೋಡಿದರೇ ಅವು ಪಾದಚಾರಿಗಳಿಗೆ ವಾಹನಚಾಲಕರಿಗೆ ಅಪಾಯಕಾರಿ ಎಂಬುದು ಸ್ಪಷ್ಟವಾಗಿದೆ. ಬಳಕೆಗೆ ಯೋಗ್ಯವಾದ ರಸ್ತೆ ಮತ್ತು ಫುಟ್ಪಾತ್ಗಳನ್ನು ಹೊಂದುವುದು ಸಂವಿಧಾನಬದ್ಧ ಅಧಿಕಾರ. ಆದ್ದರಿಂದ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಬಿಬಿಎಂಪಿಯ ಕರ್ತವ್ಯವಾಗಿದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ಅರ್ಜಿಯ ಮೇಲೆ ಹೆಚ್ಚಿನ ವಿಚಾರಣೆಯು ಮಾರ್ಚ್ 19ಕ್ಕೆ ಮುಂದೂಡಲ್ಪಟ್ಟಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ