ಜಿಲ್ಲೆ

ಬೀದಿ ಸ್ವಚ್ಛತೆ ಮಾಡಿದ ಹೈಕೋರ್ಟ್‌ ನ್ಯಾಯಮೂರ್ತಿ

ಕಾರವಾರ: ಸ್ವಚ್ಚತೆ ಎನ್ನುವುದು ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಆಗದೇ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣನ್ ನಟರಾಜನ್ ಹೇಳಿದರು.
ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳು ಆಗಿರುವ ಅವರು ಗಾಂಧಿ ಜಯಂತಿಯ ಅಂಗವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸೋಮವಾರ ಆಯೋಜಿಸಿದ್ದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದ ಅಂಗವಾಗಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನಂತರ ಸ್ವತಃ ಸ್ವಚ್ಛತೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ:ಕಾವೇರಿ ನದಿ ನೀರಿಗೆ ಸಮರ್ಥ ಪ್ರತಿರೋಧ ವ್ಯಕ್ತಪಡಿಸದ ರಾಜ್ಯ ಸರ್ಕಾರ
ಮಹಾತ್ಮ ಗಾಂಧೀಜಿ ಅವರ ಕಂಡ ಕನಸನ್ನು ನನಸು ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಸಾರ್ವಜನಿಕ ಕಟ್ಟಡ ಮತ್ತು ಆವರಣದಲ್ಲಿ ಮಾತ್ರ ಸ್ವಚ್ಚತೆ ಕಂಡುಬರದೇ ಆಡಳಿತ ವ್ಯವಸ್ಥೆಯಲ್ಲಿ ಸಹ ಸ್ವಚ್ಚತೆ ಕಂಡುಬರಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವುದರ ಮೂಲಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮೂಡಬೇಕು. ಒಳ್ಳೆಯ ಕಾರ್ಯಗಳನ್ನು ಮಾಡಲು ತಡ ಮಾಡದೇ ತಕ್ಷಣವೇ ಅವುಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದರು.
ಜಿಲ್ಲಾ ಪ್ರಧಾನ ಸೆಶನ್ಸ್ ನ್ಯಾಯಾಧೀಶ ಡಿ.ಎಸ್.ವಿಜಯ ಕುಮಾರ್,ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಮಾಯಣ್ಣ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ರೇಷ್ಮಾ ಜೇನ್ ರೋಡ್ರಿಗಸ್, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಸಂಗಪ್ಪ ದರ್ಗದ, ಸಿವಿಲ್ ನ್ಯಾಯಾಧೀಶ ಧನುರಾಜ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅಕ್ಷತಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಎನ್.ಜಾಂಬಾವಳಿಕರ್, ಕಾರ್ಯದರ್ಶಿ ಜಿ.ಎಫ್.ನಾಯ್ಕ ಉಪಸ್ಥಿತರಿದ್ದರು. ನಂತರ ನ್ಯಾಯಮೂರ್ತಿಗಳು ಬಾಲಕಿಯರ ಬಾಲಮಂದಿರ, ಹಾಗೂ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದರು.