ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ೧೭ ವರ್ಷ ವಯೋಮಿತಿಯ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಮಹರಾಷ್ಟ್ರದ ವಿರುದ್ಧ ಜಯಸಾಧಿಸಿ ಶುಭಾರಂಭ ಮಾಡಿತು.
ಮಡಿಕೇರಿಯ ಸಾಯಿ ಟರ್ಫ್ ಮೈದಾನದಲ್ಲಿ ನಡೆದ ಕರ್ನಾಟಕ ಮತ್ತು ಮಹರಾಷ್ಟ್ರ ತಂಡದ ವಿರುದ್ಧ ಪಂದ್ಯದಲ್ಲಿ ಕರ್ನಾಟಕ ತಂಡ ೧-೦ ಗೋಲುಗಳಿಂದ ಮಣಿಸಿತು. ಕರ್ನಾಟಕ ತಂಡದ ಪರ ಪ್ರಿನ್ಸಿಯಾ ೨೪ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿದರು.
ಛತ್ತೀಸ್ಗಡ್ ತಂಡ ಪುದುಚೇರಿ ತಂಡವನ್ನು ೫-೦ ಗೋಲುಗಳಿಂದ ಮಣಿಸಿತು. ತಂಡದ ಪರ ದುಬೆ ರಾವತ್ ೨, ಸಿಮ್ರಾನ್ ಯಾದವ್, ಅಂಚಲ್ ವರ್ಮ, ನಂದೀನಿ ಯಾದವ್ ತಲಾ ಒಂದೊಂದು ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಪಂಜಾಬ್ ತಂಡ ನವೋದಯ ವಿದ್ಯಾಲಯ ತಂಡವನ್ನು ೧೨-೦ ಗೋಲುಗಳಿಂದ ಮಣಿಸಿತು.
ಕೇಂದ್ರಿಯ ವಿದ್ಯಾಲಯ ಮತ್ತು ಮಹರಾಷ್ಟ್ರ ನಡುವಿನ ಪಂದ್ಯದಲ್ಲಿ ಮಹರಾಷ್ಟ್ರ ತಂಡ ೩-೦ ಗೋಲುಗಳಿಂದ ಜಯಶಾಲಿಯಾಯಿತು. ಮತ್ತೊಂದು ಪಂದ್ಯದಲ್ಲಿ ಛತ್ತೀಸ್ಗಡ್ ತಂಡ ನವೋದಯ ವಿದ್ಯಾಲಯದ ವಿರುದ್ಧ ೧೭-೦ ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿತು. ಪಂಜಾಬ್ ಮತ್ತು ಪುದುಚೇರಿ ನಡುವಿನ ಪಂದ್ಯದಲ್ಲಿ ಪಂಜಾಬ್ ತಂಡ ೫-೦ ಗೋಲುಗಳಿಂದ ಗೆಲುವಿನ ನಗೆಬೀರಿತು.
ಕೂಡಿಗೆ ಸರ್ಕಾರಿ ಕ್ರೀಡಾ ಶಾಲೆಯ ಟರ್ಫ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಿಹಾರ್ ತಂಡ ಆಂದ್ರಪ್ರದೇಶ್ ತಂಡವನ್ನು ೨-೧ ಗೋಲುಗಳಿಂದ ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಕೇರಳ ತಂಡವು ಗುಜರಾತ್ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿತು. ಜಾರ್ಖಂಡ್ ತಂಡ ರಾಜಾಸ್ಥಾನ ತಂಡವನ್ನು ೫-೦ ಗೋಲುಗಳಿಂದ ಮಣಿಸಿತು.
ಸೋಮವಾರಪೇಟೆ ಟರ್ಫ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚಂಡಿಘಡ್ ತಂಡ ಉತ್ತರಖಂಡ್ ತಂಡವನ್ನು ೫-೦ ಗೋಲುಗಳಿಂದ ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ ಹಿಮಾಚಲ್ ಪ್ರದೇಶ್ ತಂಡ ವಿದ್ಯಾಭಾರತಿ ತಂಡದ ವಿರುದ್ಧ ೧೨-೦ ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿತು.
ಉತ್ತರಪ್ರದೇಶ್ ಮತ್ತು ತೆಲಂಗಾಣ ನಡುವಿನ ಪಂದ್ಯದಲ್ಲಿ ಉತ್ತರ್ ಪ್ರದೇಶ್ ೯-೦ ಗೋಲುಗಳಿಂದ ಜಯಶಾಲಿಯಾಯಿತು. ಮತ್ತೊಂದು ಪಂದ್ಯದಲ್ಲಿ ಮದ್ಯಪ್ರದೇಶ್ ತಂಡ ಉತ್ತರಖಂಡ್ ವಿರುದ್ಧ ೪-೦ ಗೋಲುಗಳಿಂದ ಗೆಲುವು ಸಾಧಿಸಿತು.
ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದಿಲ್ಲಿ ತಂಡ ವೆಸ್ಟ್ ಬೆಂಗಾಲ್ ತಂಡವನ್ನು ೧೦-೦ ಗೋಲುಗಳಿಂದ ಮಣಿಸಿತು. ತಮಿಳುನಾಡು ಮತ್ತು ಮಣಿಪುರ್ ತಂಡಗಳ ನಡುವಿನ ಪಂದ್ಯದಲ್ಲಿ ಇತ್ತಂಡಗಳು ಯಾವುದೇ ಗೋಲು ದಾಖಲಿಸದ ಪರಿಣಾಮ ಡ್ರಾದಲ್ಲಿ ಅಂತ್ಯಕಂಡಿತು. ಹರಿಯಾಣ ಮತ್ತು ಬೆಂಗಾಲ್ ತಂಡಗಳ ನಡುವಿನ ಪಂದ್ಯದಲ್ಲಿ ಹರಿಯಾಣ ತಂಡ ೧೫-೦ ಗೋಲುಗಳಿಂದ ಗೆಲುವು ಸಾಧಿಸಿತು.