ಜಿಲ್ಲೆ

ಜ.17ರಿಂದ ಉಡುಪಿಯಲ್ಲಿ ಕರ್ನಾಟಕ ಕ್ರೀಡಾಕೂಟ

ಗೋಪಾಲಕೃಷ್ಣ ಪಾದೂರ್

ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಸಂಸ್ಥೆ, ದಕ್ಷಿಣ ಕನ್ನಡ ಹಾಗೂ ಉಡುಪಿ  ಜಿಲ್ಲಾಡಳಿತ ಸಂಯುಕ್ತ ಆಶ್ರಯದಲ್ಲಿ ಜ.-17  ರಿಂದ 23- ರವರೆಗೆ ಉಡುಪಿ ಹಾಗೂ ಮಂಗಳೂರಿನಲ್ಲಿ ಕರ್ನಾಟಕ ಕ್ರೀಡಾಕೂಟ&-2025 ಆಯೋಜಿಸಲಾಗಿದೆ. ಉಡುಪಿ ಮತ್ತು ಮಣಿಪಾಲದಲ್ಲಿ 11 ಕ್ರೀಡಾ ಸ್ಪರ್ಧೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯಲ್ಲಿ  ನಡೆಯುವ ಸ್ಪರ್ಧೆಗಳಲ್ಲಿ 1373 ಕ್ರೀಡಾಪಟುಗಳು, 260 ತಾಂತ್ರಿಕ ಸಿಬ್ಬಂದಿ  ಸೇರಿದಂತೆ ಒಟ್ಟು 1633 ಮಂದಿ ಭಾಗವಹಿಸಲಿದ್ದಾರೆ. ಪ್ರತಿಯೊಂದು ಕ್ರೀಡೆಯಲ್ಲಿಯೂ ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿವೆ.  ಕ್ರೀಡಾಕೂಟದಲ್ಲಿ ಒಟ್ಟು 631 ಚಿನ್ನದ ಪದಕ, 631 ಬೆಳ್ಳಿಯ ಪದಕ ಮತ್ತು 827 ಕಂಚಿನ ಪದಕಗಳಿಗಾಗಿ ಸ್ಪರ್ಧೆ ಆಯೋಜಿಸಲಾಗಿದೆ. ರಾಜ್ಯಾದ್ಯಂತ ವಿವಿಧ ಕ್ರೀಡಾ ಸಂಸ್ಥೆಗಳಿಂದ ಟಾಪ್ 8 ಸ್ಪರ್ಧಿಗಳನ್ನು ಆಯ್ಕೆಮಾಡಲಾಗುತ್ತದೆ. ಜಿಲ್ಲೆಯ 60 ರಿಂದ 70 ಮಂದಿ ಉತ್ತಮ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಕ್ರೀಡಾಕೂಟಕ್ಕೆ ಸಕಲ ಸಿದ್ಧತೆ

ಉಡುಪಿಯಲ್ಲಿ ನಡೆಯಲಿರುವ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಹಾಗೂ ತಾಂತ್ರಿಕ ಸಿಬ್ಬಂದಿಗೆ ಮಣಿಪಾಲದ ಮಾಹೆ ಹಾಗೂ ಉಡುಪಿಯ ವಿವಿಧ ವಸತಿಗೃಹಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಜ್ಜರಕಾಡಿನ ಮಹಿಳಾ ಸಮಾಜದಲ್ಲಿ ಊಟೋಪಹಾರ ವ್ಯವಸ್ಥೆ ಮಾಡಲಾಗಿದೆ. 30 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ಸಿಂಥೆಟಿಕ್ ಟ್ರಾ$್ಯಕ್ ಅಳವಡಿಸಲಾಗುತ್ತಿದೆ. ನಗರಸಭೆ ವತಿಯಿಂದ ಅಜ್ಜರಕಾಡು ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಶೌಚಾಲಯ ನಿರ್ಮಿಸಲಾಗಿದೆ. ಸುತ್ತಮುತ್ತಲಿನ ರಸ್ತೆ ಬದಿಯಲ್ಲಿ ಇಂಟರ್ಲಾಕ್ ಅಳವಡಿಸಲಾಗಿದೆ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್, ಮಾಹೆ ಕ್ರೀಡಾ ಕಾರ್ಯದರ್ಶಿ ಡಾ. ವಿನೋದ್ ನಾಯಕ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.