ಜಿಲ್ಲೆ

ಕಾಸರಗೋಡಿನ ಇಬ್ಬರಿಗೆ ಕರ್ನಾಟಕ ಸಿಎಂ ಪೊಲೀಸ್ ಪದಕ

ಕುಂಬಳೆ: ಕರ್ನಾಟಕ ಪೊಲೀಸ್ ಸೇವೆಯಲ್ಲಿ ಸಾಧನೆಗೈದ ಜಿಲ್ಲೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಪದಕ ಪಡೆದುಕೊಂಡಿದ್ದಾರೆ.

ಕಾಸರಗೋಡು ಅಶೋಕನಗರ ನಿವಾಸಿ, ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್‌ನ ಎಎಸ್‌ಐ ಕೆ.ವಿ.ಮೋಹನ್ 2023ರ ಸಾಲಿನ ಮುಖ್ಯಮಂತ್ರಿ ಪದಕ ಹಾಗೂ ಕಾಸರಗೋಡು ಜಿಲ್ಲೆಯ ಕುಂಬ್ಡಾಜೆಯ ತೆಕ್ಕೆಮೂಲೆ ನಿವಾಸಿ, ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್‌ನ ಎಚ್.ಸಿ ದಾಮೋದರ್ ಕೆ. 2024ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ಬುಧವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಡೆದುಕೊಂಡಿದ್ದಾರೆ.

ಕೆ.ವಿ.ಮೋಹನ್ 1993ನೇ ಬ್ಯಾಚ್‌ನ ಪೊಲೀಸ್ ಸೇವೆಗೆ ಸೇರ್ಪಡೆಗೊಂಡು ಸುರತ್ಕಲ್, ಬಂದರು, ಪಾಂಡೇಶ್ವರ, ಉಳ್ಳಾಲ, ರೌಡಿನಿಗ್ರಹದಳ ಮುಂತಾದ ಕಡೆ ಕರ್ತವ್ಯ ನಿರ್ವಹಿಸಿ ಹಲವು ಪ್ರಕರಣಗಳನ್ನು ಬೇಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರಸ್ತುತ ಮಂಗಳೂರು ಕ್ರೈಮ್ ಬ್ರಾಂಚ್‌ನಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡಾಪಟು ಆಗಿರುವ ಅವರು ಕಾಸರಗೋಡು ಅಶೋಕನಗರ ಅಶೋಕ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್‌ನ ಅಧ್ಯಕ್ಷರೂ ಆಗಿದ್ದಾರೆ.

ದಾಮೋದರ್ ಕೆ. ಅವರು 2000ನೇ ಬ್ಯಾಚ್‌ನಲ್ಲಿ ಪೊಲೀಸ್ ಸೇವೆಗೆ ಸೇರ್ಪಡೆಗೊಂಡು ಮಂಗಳೂರು ನಗರದ ಬಂದರು, ಪಾಂಡೇಶ್ವರ, ರೌಡಿನಿಗ್ರಹ ದಳ ಸೇರಿದಂತೆ ಹಲವು ಕಡೆ ಕರ್ತವ್ಯ ನಿರ್ವಹಿಸಿದ್ದಲ್ಲದೆ ಹಲವು ಪ್ರಕರಣ ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರಸ್ತುತ ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್‌ನಲ್ಲಿ ಎಚ್‌ಸಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.