ಅಥಣಿ: ಉತ್ತರ ಕರ್ನಾಟಕದ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಮಹಾರಾಷ್ಟ್ರದ ಗುಡ್ಡಾಪುರದ ದಾನಮ್ಮದೇವಿ ಕನ್ನಡಿಗರ ಆರಾಧ್ಯದೇವತೆ. ಈ ಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರ 11 ಕೋಟಿ ರೂ. ಅನುದಾನ ನೀಡಿ ಕರ್ನಾಟಕ ಭವನ ನಿರ್ಮಾಣ ಮಾಡಿರುವುದು ಎಲ್ಲ ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಮಹಾರಾಷ್ಟ್ರದ ಜತ್ತ ತಾಲೂಕಿನ ಗುಡ್ಡಾಪುರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕರ್ನಾಟಕ ಭವನ ಉದ್ಘಾಟನೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಯತ್ನದಿಂದ ನಾನು ಮುಜರಾಯಿ ಸಚಿವೆಯಾದ ಸಂದರ್ಭದಲ್ಲಿ 11 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಅದೇ ರೀತಿ 2 ಎಕರೆ ಜಮೀನಿನಲ್ಲಿ ಸುಂದರವಾದ ಬೃಹತ್ ಕರ್ನಾಟಕ ಭವನ ನಿರ್ಮಾಣವಾಗಿರುವುದು ಎಲ್ಲ ಕನ್ನಡಿಗ ಭಕ್ತರಿಗೆ ಅನುಕೂಲವಾಗಲಿದೆ. ಪಂಢರಪುರ, ತುಳಜಾಪುರ, ಶಬರಿಮಲೆಯಲ್ಲಿ ಸಹ ಕರ್ನಾಟಕ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದರು.
ಸಾನ್ನಿಧ್ಯವಹಿಸಿದ್ದ ಚಿಕ್ಕಮಗಳೂರಿನ ದತ್ತ ಆಶ್ರಮದ ಅವಧೂತ ವಿನಯ ಗುರೂಜಿ ಮಾತನಾಡಿ, ಉತ್ತರ ಕರ್ನಾಟಕದ ಮಣ್ಣಿನಲ್ಲಿ ಸಂಸ್ಕಾರದ ಗುಣವಿದೆ. ಬಸವಣ್ಣನವರ ಕಾಲದಲ್ಲಿ ಮಹಾಶಿವಶರಣೆಯಾಗಿ, ಭಕ್ತಿ ಮತ್ತು ದಾಸೋಹಕ್ಕೆ ದಾನಮ್ಮ ಹೆಸರು ವಾಸಿಯಾಗಿದ್ದರು. ಬಸವಣ್ಣನವರ ಮಹಾಶಿಷ್ಯೆಯಾಗಿ ದಾನಮ್ಮ ದಾಸೋಹವನ್ನು ಮುಂದುವರಿಸಿದ್ದು, ಅದು ಇಂದಿಗೂ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ದಾಸೋಹ ಭವನ ಉದ್ಘಾಟಿಸಿದ ಮುಗಳಖೋಡ/ಜಿಡಗಾ ಮಠದ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ನಿಜವಾದ ಕೈಲಾಸ ಗುಡ್ಡಾಪುರ ಕ್ಷೇತ್ರದಲ್ಲಿದೆ. ಈ ಪುಣ್ಯಭೂಮಿಯ ಅಭಿವೃದ್ಧಿ ಪರ್ವ ಇನ್ನು ಆರಂಭವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಸಮಿತಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ಗುಡ್ಡಾಪುರ ಇರುವುದು ಮಹಾರಾಷ್ಟ್ರದಲ್ಲಿ ಆದರೆ, ದೇವಸ್ಥಾನ ಅಭಿವೃದ್ಧಿಗೆ ಮಹಾರಾಷ್ಟ್ರ ಸರ್ಕಾರ ಇಲ್ಲಿಯವರೆಗೂ ಯಾವುದೇ ರೀತಿಯ ಅನುದಾನ ನೀಡಿಲ್ಲ. 50 ರಿಂದ 60 ಕೋಟಿ ರೂ. ಅನುದಾನದಲ್ಲಿ ದೇವಸ್ಥಾನದ ಕಟ್ಟಡ ನಿರ್ಮಾಣ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.
ಬಬಲೇಶ್ವರದ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಗೌಡಗಾವದ ಜಯಸಿದ್ದೇಶ್ವರ ಸ್ವಾಮೀಜಿ, ಗುಡ್ಡಾಪುರದ ಗುರುಪಾದ ಸ್ವಾಮೀಜಿ, ಜತ್ತ ಮಾಜಿ ಶಾಸಕ ವಿಲಾಸರಾವ ಜಗತಾಪ, ದೇವಸ್ಥಾನ ಮಾಜಿ ಅಧ್ಯಕ್ಷ ವಿಶ್ವನಾಥ ಗಣಿ, ಗ್ರಾಪಂ ಅಧ್ಯಕ್ಷೆ ತುಳಸಾಬಾಯಿ ಥೋರಾತ, ದೇವಸ್ಥಾನ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಗೊಬ್ಬಿ, ನಿರ್ದೇಶಕರಾದ ಸಿದ್ದಯ್ಯ ಹಿರೇಮಠ, ಪ್ರಕಾಶ ಗಣಿ, ಚಂದ್ರಶೇಖರ ಇಂಡಿ, ಶಂಭುಲಿಂಗ ಮಮದಾಪುರ, ಸದಾಶಿವ ಗುಡ್ಡೊಡಗಿ, ಗಜೇಂದ್ರ ಕುಲ್ಲೋಳಿ, ಸಾಗರ ಚಂಪಣ್ಣವರ, ದಾನಪ್ಪ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ ಇತರರು ಇದ್ದರು.