ಮಂಗಳೂರಿನಲ್ಲಿ ಭಾನುವಾರ ನಡೆದ ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು 100 ರೂ. ನಾಣ್ಯ, ಅಂಚೆ ಚೀಟಿ ಮತ್ತು ಲಕೋಟೆ ಬಿಡುಗಡೆ ಮಾಡಿದರು. ಭಾರತದ ಅಟಾರ್ನಿ ಜನರಲ್ ವೆಂಕಟರಮಣಿ, ಕರ್ನಾಟಕ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್, ಕರ್ನಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್, ಬ್ಯಾಂಕ್ ಚೇರ್ಮನ್ ಪಿ.ಪ್ರದೀಪ್ ಕುಮಾರ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಮಂಗಳೂರು
ಕರ್ಣಾಟಕ ಬ್ಯಾಂಕು ರಾಜ್ಯದ ಹೆಮ್ಮೆ ಹಾಗೂ ಅಭಿಮಾನವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರದ ಟಿಎಂಎ ಪೈ ಇಂಟರ್ನೇಶನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಭಾನುವಾರ ಜರುಗಿದ ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾರ ಪ್ರಮಾದವೋ ಏನೋ, ನಮ್ಮ ಮಣ್ಣಿನಲ್ಲಿ ಹುಟ್ಟಿದ ಸಿಂಡಿಕೇಟ್, ಕಾರ್ಪೋರೇಶನ್ ಬ್ಯಾಂಕ್ ಗಳು ಕಣ್ಮರೆಯಾಗಿವೆ. ನಿಮ್ಮ ಮುಂದಿನ ಗುರಿ ನಾವು ಕಳೆದುಕೊಂಡಿರುವ ನಮ್ಮ ಮಣ್ಣಿನ ಬ್ಯಾಂಕುಗಳನ್ನು ಮತ್ತೆ ಕರ್ಣಾಟಕ ಬ್ಯಾಂಕುಗಳ ಮೂಲಕ ಮತ್ತೆ ವಾಪಸ್ ಪಡೆದು, ನಮ್ಮ ಗೌರವ ಸ್ವಾಭಿಮಾನ ಮರಳಿ ಪಡೆಯುವುದು. ಈ ಬಗ್ಗೆ ಕರ್ಣಾಟಕ ಬ್ಯಾಂಕಿನ ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪಣ ತೊಡಬೇಕು. ನಮ್ಮ ಮಣ್ಣಿನಲ್ಲಿ ಹುಟ್ಟಿ ಕಣ್ಮರೆಯಾಗಿರುವ ಬ್ಯಾಂಕುಗಳು ಹಾಗೂ ಇತರೆ ಬ್ಯಾಂಕ್‌ಗಳನ್ನು ಕರ್ಣಾಟಕ ಬ್ಯಾಂಕ್ ಜತೆ ವಿಲೀನ ಮಾಡಿಕೊಳ್ಳುವಂತಾಗಬೇಕು ಎಂದು ಅವರು ಹಾರೈಸಿದರು.
- ವರದಿ ಕೋರಿಕೆ
ಕರ್ಣಾಟಕ ಬ್ಯಾಂಕ್ ಈ ಪ್ರದೇಶವನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಅಧ್ಯಯನ ಮಾಡಬೇಕು. ಇಲ್ಲಿನ ನಮ್ಮ ಸೋದರ ಸೋದರಿಯರು ಬಹಳ ವಿದ್ಯಾವಂತರಿದ್ದಾರೆ. ಅವರು ಉದ್ಯೋಗ ಹುಡುಕಿ ಹೊರ ರಾಜ್ಯ ಹಾಗೂ ವಿದೇಶಗಳಿಗೆ ಹೋಗುತ್ತಿದ್ದಾರೆ. ಇವರನ್ನು ರಾಜ್ಯದಲ್ಲೇ ಉಳಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ವರದಿ ನೀಡಿ ಎಂದು ಅವರು ಕೋರಿದರು
ಕರ್ಣಾಟಕ ಬ್ಯಾಂಕ್ ಸಾರ್ವಜನಿಕರ ಮತ್ತು ಕೃಷಿಕರ ಬದುಕಿಗೆ ಆಧಾರವಾಗಿದೆ. ಈ ಬ್ಯಾಂಕ್‌ನಿಂದಾಗಿ ಸಾಕಷ್ಟು ಮಂದಿ ಸಾಲ ಸೌಲಭ್ಯ ಪಡೆದು ತಮ್ಮ ಬದುಕು ರೂಪಿಸಿಕೊಂಡಿದ್ದು, ಉತ್ತಮ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹೆಸರು ಅಜರಾಮರವಾಗಿ ಉಳಿಯಬೇಕು. ಬ್ಲಡ್ ಮತ್ತು ದುಡ್ಡು ಚಲಾವಣೆಯಲ್ಲಿ ಇದ್ದಾಗ ಮಾತ್ರ ಅನುಕೂಲ ಎಂದು ನಮ್ಮ ಸ್ವಾಮಿಗಳು ಯಾವಾಗಲು ಹೇಳೋರು. ಗ್ರಾಹಕರು ಶಕ್ತಿಯುತರಾದಾಗ ಮಾತ್ರ ಬ್ಯಾಂಕ್ ಕೂಡ ಬಲಿಷ್ಠವಾಗಲು ಸಾಧ್ಯ ಎಂದು ಹೇಳಿದರು.
- ಕ್ಷೇತ್ರದ ಸಂಶೋಧನೆ
ಭಾರತದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ಮಾತನಾಡಿ, ಜಾಗತಿಕ ಮಟ್ಟದಲ್ಲಿ ಬ್ಯಾಂಕುಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಕೂಡ ಭಾರತೀಯ ಬ್ಯಾಂಕುಗಳು ಗಟ್ಟಿಯಾಗಿ ಉಳಿದಿವೆ. ನಮ್ಮ ಬ್ಯಾಂಕುಗಳು ನಾವಿನ್ಯತೆಯ ಸೇವೆಗಳು ನಾವು ಉಳಿಯಲು ಕಾರಣ. ಬ್ಯಾಂಕಿಂಗ್ ಕ್ಷೇತ್ರದ ಸಮಸ್ಯೆಗಳ ಅಧ್ಯಯನ ಮತ್ತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಸಂಸ್ಥೆಗಳನ್ನು ತೆರೆಯುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮಂಗಳೂರಿನಲ್ಲಿ ಜನ್ಮ ತಳೆದ ಕರ್ಣಾಟಕ ಬ್ಯಾಂಕು ಗ್ರಾಹಕ ಸ್ನೇಹಿ ಸೇವೆ ಮೂಲಕ ದೇಶವ್ಯಾಪಿ ಎಲ್ಲ ವರ್ಗದ ಜನರನ್ನು ಜೋಡಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
- 100 ರೂ ನಾಣ್ಯ, ಅಂಚೆ ಚೀಟಿ ಬಿಡುಗಡೆ
ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ 100 ರೂ. ನಾಣ್ಯ, 100 ವರ್ಷಗಳ ಸಾಧನೆಯ ಸ್ಮರಣ ಸಂಚಿಕೆ ಯನ್ನು ಡಿ.ಕೆ. ಶಿವಕುಮಾರ್ ಲೋಕಾರ್ಪಣೆ ಮಾಡಿದರು. ಇದಕ್ಕೂ ಮೊದಲು ಅವರು ಬ್ಯಾಂಕಿನ ಶತಮಾನೋತ್ಸವ ಭವನವನ್ನು ಅವರು ಉದ್ಘಾಟಿಸಿದರು. ಇಂಡಿಯಾ ಪೋಸ್ಟ್ ವತಿಯಿಂದ ನೂತನ ಪೋಸ್ಟಲ್ ಸ್ಟ್ಯಾಂಪ್ ಮತ್ತು ಲಕೋಟೆಯನ್ನು ಆರ್. ವೆಂಕಟರಮಣಿ ಮತ್ತು ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಬಿಡುಗಡೆಗೊಳಿಸಿದರು.
ಶತಮಾನೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ಕರ್ಣಾಟಕ ಬ್ಯಾಂಕಿನ ಒಟ್ಟು 15 ಹೊಸ ಶಾಖೆಗಳನ್ನು ಸಾಂಕೇತಿಕವಾಗಿ ಡಿಕೆ ಶಿವಕುಮಾರ್ ಅವರು ವರ್ಚುವಲ್ ಆಗಿ ಉದ್ಘಾಟಿಸಿದರು.
ಬ್ಯಾಂಕಿನ ಚೇರ್ಮನ್ ಪಿ. ಪ್ರದೀಪ್ ಕುಮಾರ್ ಅವರು ಮಾತನಾಡಿ, 100 ವರ್ಷಗಳಲ್ಲಿ ಗ್ರಾಹಕರ ಅವಿರತ ಅನಿಯಮಿತ ಬೆಂಬಲ, ಸಿಬಂದಿಗಳ ಸೇವಾ ಬದ್ಧತೆ, ಆಡಳಿತವರ್ಗದ ಸದಾ ನವೀನತೆಗೆ ತೆರೆದುಕೊಳ್ಳುವ ಗುಣದಿಂದಾಗಿ ಬ್ಯಾಂಕ್ ಇಷ್ಟು ದೊಡ್ಡ ಗಾತ್ರಕ್ಕೆ ಬೆಳೆಯುವಂತಾಯಿತು ಎಂದರು.
ಕರ್ಣಾಟಕ ಬ್ಯಾಂಕಿನ ಎಂಡಿ ಹಾಗೂ ಸಿಇಒ ಶ್ರೀಕೃಷ್ಣನ್ ಎಚ್ ಸ್ವಾಗತಿಸಿದರು., ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ವಂದಿಸಿದರು. ಚೇರ್ಮನ್ ಪಿ.ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು. ಚೈತ್ರಾ ವಾಸುದೇವನ್ ಕಾರ್ಯಕ್ರಮ ನಿರ್ವಹಿಸಿದರು.
ಸಭೆಯ ಬಳಿಕ ಖ್ಯಾತ ಗಾಯಕರಾದ ವಿಜಯ ಪ್ರಕಾಶ್ ಮತ್ತು ಶಂಕರ್ ಮಹಾದೇವನ್ ಅವರ ಸಂಗೀತ ಕಾರ್ಯಕ್ರಮ ಸಭಾಂಘಣ ತುಂಬಿದ್ದ ಸಂಗೀತ ಅಭಿಮಾನಿಗಳನ್ನು ಮುದಗೊಳಿಸಿತು.