ಮಂಗಳೂರು : ಕರ್ಣಾಟಕ ಬ್ಯಾಂಕ್ ಪ್ರಸಕ್ತ ವಿತ್ತೀಯ ವರ್ಷದ ಪ್ರಥಮ ಮೂರು ತ್ರೈಮಾಸಿಕಗಳಲ್ಲಿ ಶೇ.25 ವೃದ್ಧಿ ದರದೊಂದಿಗೆ 1032.04 ಕೋಟಿ ರೂ. ನಿವ್ವಳ ಲಾಭ ಘೋಷಿಸಿದೆ. ಹಿಂದಿನ ವಿತ್ತೀಯ ವರ್ಷದ ಪ್ರಥಮ ಮೂರು ತ್ರೈಮಾಸಿಕದಲ್ಲಿ ನಿವ್ವಳ ಲಾಭ 826.49 ಕೋಟಿ ರೂ.ಆಗಿತ್ತು. ಇದರಿಂದ ಪ್ರಸಕ್ತ ತೃತೀಯ ತ್ರೈಮಾಸಿಕದ ಅಂತ್ಯಕ್ಕೆ ವಾರ್ಷಿಕ ಶೇ.10.11ರ ವೃದ್ಧಿ ದರದೊಂದಿಗೆ 331.08 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭ 300.68 ಕೋಟಿ ರೂ.ಆಗಿತ್ತು.
ಬ್ಯಾಂಕಿನ ಮಂಗಳೂರು ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ವಿತ್ತೀಯ ವರ್ಷ 2023-24 ರ
ತೃತೀಯ ತ್ರೈಮಾಸಿಕದ (31.12.2023) ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು. ಬ್ಯಾಂಕಿನ ಒಟ್ಟು ವ್ಯವಹಾರ ವಾರ್ಷಿಕ ಶೇ. 9.22 ರ ದರದಲ್ಲಿ ವೃದ್ಧಿ ಕಂಡಿದ್ದು, 1,61,936.36 ಕೋಟಿ ರೂ.ಗೆ ಏರಿದೆ. ಬ್ಯಾಂಕಿನ ಮುಂಗಡಗಳು ಶೇ. 9.53 ದರದಲ್ಲಿ ವೃದ್ಧಿ ಕಂಡು
69,740.97 ಕೋಟಿ ರೂ.ಹಾಗೂ ಠೇವಣಿಗಳು ಶೇ. 8.98 ರ ದರದಲ್ಲಿ ವೃದ್ಧಿ ಕಂಡು 92,195.39 ಕೋಟಿ ರೂ.ಗೆ ತಲುಪಿದೆ.
ಬ್ಯಾಂಕಿನ ಸ್ಥೂಲ ಅನುತ್ಪಾದಕ ಸ್ವತ್ತುಗಳು (ಜಿಎನ್‌ಪಿಎ) 10 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆಯಾಗಿದ್ದು, ಶೇ. 3.64 ಕ್ಕೆ ಇಳಿಕೆ ಕಂಡಿವೆ. ಇದು ಮಾರ್ಚ್ 2023ರಲ್ಲಿ ಶೇ. 3.74 ಇತ್ತು. ನಿವ್ವಳ ಅನುತ್ಪಾದಕ ಸ್ವತ್ತುಗಳು (ಎನ್‌ಎನ್‌ಪಿಎ) ಕೂಡ 15 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆಯಾಗಿದ್ದು, ಶೇ.1.55 ಕ್ಕೆ ಇಳಿಕೆ ಕಂಡಿವೆ. ಇದು ಮಾರ್ಚ್ 2023 ರಲ್ಲಿ ಶೇ. 1.70 ಇತ್ತು. ಮಾರ್ಚ್ 2023ರಲ್ಲಿ ಶೇ. 80.86 ರಷ್ಟಿದ್ದ ಪ್ರೊವಿಶನ್ ಕವರೇಜ್ ಅನುಪಾತ ಪ್ರಸಕ್ತ ತ್ರೈಮಾಸಿಕದಲ್ಲಿ ಶೇ. 80.75ಕ್ಕೆ ತಲುಪಿದ್ದು, ಕಳೆದ ವಿತ್ತೀಯ ವರ್ಷದ ತೃತೀಯ ತ್ರೈಮಾಸಿಕದ ಅಂತ್ಯಕ್ಕೆ ಇದು ಶೇ.80.21 ಆಗಿತ್ತು.
*ಅಭಿವೃದ್ದಿಯ ಪಥ :
ಈ ಫಲಿತಾಂಶಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ ಬ್ಯಾಂಕಿನ ಎಂಡಿ ಹಾಗೂ ಸಿಇಒ ಶ್ರೀಕೃಷ್ಣನ್ ಎಚ್ ಮಾತನಾಡಿ ‘ ಕರ್ಣಾಟಕ ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಕಾರ್ಯಕ್ಷಮತೆಗೆ ಬ್ಯಾಂಕ್ ಕೈಗೊಂಡ ಸುಧಾರಿತ ಕಾರ್ಯಾಚರಣೆಗಳು ಮತ್ತು ಪರಿವರ್ತನೆಯ
ಬದಲಾವಣೆಗಳು ಕಾರಣವಾಗಿದೆ. ಆರ್ಥಿಕ ಕ್ಷೇತ್ರದಲ್ಲಿ ಹೆಚ್ಚು ಪ್ರಸ್ತುತವಾಗಲು ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಿದ್ದೇವೆ .ಹಲವಾರು ಹೊಸ ಉತ್ಪನ್ನಗಳನ್ನು ಪ್ರಾರಂಭಿಸಿದ್ದೇವೆ. ತಂತ್ರಜ್ಞಾನ ವೇದಿಕೆಗಳು ಮತ್ತು ಆಂತರಿಕ ಪ್ರಕ್ರಿಯೆಗಳನ್ನು ಇನ್ನಷ್ಟು ಸುಧಾರಿಸುವುದರ ಮೂಲಕ ಕಳೆದ ತ್ರೈಮಾಸಿಕದಲ್ಲಿ, ವಿವಿಧ ಫಿನ್‌ಟೆಕ್ ಸಹಯೋಗಗಳು ಮತ್ತು ಸಹ-ಸಾಲ ನೀಡುವುದರೊಂದಿಗೆ ವ್ಯವಹಾರವನ್ನು ವಿಸ್ತರಿಸಿದ್ದೇವೆ. ಶತಮಾನೋತ್ಸವದ ವರ್ಷದಲ್ಲಿ ನಾವು ಸಮರ್ಪಕವಾದ ಅಭಿವೃದ್ಧಿ ಪಥದಲ್ಲಿದ್ದೇವೆ. ಒಂದು ಶತಮಾನದ ಅಚಲ ಬದ್ಧತೆಯನ್ನು ಹಾಗೂ
ವಿಶ್ವಾಸಾರ್ಹತೆಯನ್ನು ಹೆಮ್ಮೆಯಿಂದ ಪ್ರತಿಬಿಂಬಿಸುತ್ತಿದ್ದೇವೆ ಎಂದರು.
*ಗಮನಾರ್ಹ ಪ್ರಗತಿ :
ಬ್ಯಾಂಕಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ಮಾತನಾಡಿ ಕರ್ಣಾಟಕ ಬ್ಯಾಂಕ್ ತೃತೀಯ ತ್ರೈಮಾಸಿಕದಲ್ಲಿ ಶ್ಲಾಘನೀಯ ಆರ್ಥಿಕ ಫಲಿತಾಂಶಗಳನ್ನು ಪ್ರದರ್ಶಿಸಿದೆ. ದಕ್ಷತೆ ಮತ್ತು ಗ್ರಾಹಕರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ನವೀನ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಸವಾಲಿನ ಆರ್ಥಿಕ ಮಾರುಕಟ್ಟೆಯಲ್ಲೂ ನಮ್ಮ ಬ್ಯಾಂಕ್ ಸ್ಥಿತಿಸ್ಥಾಪಕತ್ವ ಮತ್ತು ಹೊಂದಾಣಿಕೆಯನ್ನು ಪ್ರದರ್ಶಿಸಿದೆ. ಕರ್ಣಾಟಕ ಬ್ಯಾಂಕ್ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುತ್ತಿರುವುದರೊಂದಿಗೆ ಫಿನ್‌ಟೆಕ್ ಪಾಲುದಾರರೊಂದಿಗೆ ಬ್ಯಾಂಕಿಂಗ್ ರಂಗದಲ್ಲಿ ಮುನ್ನುಗ್ಗುತ್ತಿದೆ. ನಿರಂತರವಾಗಿ ವಿಕಸನಗೊಳ್ಳುತ್ತಿರುವ ಆರ್ಥಿಕ ಪರಿಸರ ವ್ಯವಸ್ಥೆಯಲ್ಲಿ ಸತತ ಅಭಿವೃದ್ಧಿ ಮತ್ತು ಪ್ರಸ್ತುತತೆಯನ್ನು
ಖಚಿತಪಡಿಸಿಕೊಳ್ಳಲು ನಾವೀನ್ಯತೆಯ ಆರ್ಥಿಕ ಸಂಸ್ಕೃತಿಯನ್ನು ಕರ್ಣಾಟಕ ಬ್ಯಾಂಕ್ ಉತ್ತೇಜಿಸುತ್ತದೆ ಎಂದರು.