ಜಿಲ್ಲೆ

ಮಂಡ್ಯದಲ್ಲಿಲ್ಲ ಕರ್ನಾಟಕ ಬಂದ್

Mandya

ಮಂಡ್ಯ: ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಜಿಲ್ಲೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಗುರುವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದವು.

ಜಿಲ್ಲಾದ್ಯಂತ ಕರ್ನಾಟಕ ಬಂದ್‌ನ ಬಿಸಿ ಸ್ವಲ್ಪವೂ ತಟ್ಟಲಿಲ್ಲ. ಎಂದಿನಂತೆ ಅಂಗಡಿ-ಮುಂಗಟ್ಟುಗಳು, ಸರ್ಕಾರಿ ಕಚೇರಿಗಳು, ಶಾಲಾ- ಕಾಲೇಜು, ಬ್ಯಾಂಕ್‌ಗಳು, ಚಿತ್ರಮಂದಿರಗಳು, ಹೋಟೆಲ್‌ಗಳು ಕಾರ್ಯ ನಿರ್ವಹಿಸಿದವು. ಅಂತೆಯೇ, ವಾಹನಗಳ ಸಂಚಾರಕ್ಕೂ ಯಾವುದೇ ಸಮಸ್ಯೆ ಇರಲಿಲ್ಲ.

ಬಂದ್‌ಗೆ ಬೆಂಬಲ ನೀಡಿದ ಕರವೇ: ಕರ್ನಾಟಕ ಬಂದ್‌ಗೆ ಬೆಂಬಲ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಯಾದರೆ ಕೋಟ್ಯಂತರ ಕನ್ನಡಿಗರು ಜೀವನ ಕಂಡುಕೊಳ್ಳಲಿದ್ದಾರೆ. ವರದಿ ಜಾರಿ ಮಾಡುವಂತೆ ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆಯಾದರೂ, ಈವರೆಗೂ ಯಾವುದೇ ಸರ್ಕಾರಗಳು ಜಾರಿ ಮಾಡುವಲ್ಲಿ ವಿಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆರೆಯ ರಾಜ್ಯಗಳು ತಮ್ಮ ಭಾಷಿಕರ ಉದ್ಯೋಗಕ್ಕಾಗಿ ಹಲವು ಕಾನೂನು ಜಾರಿ ಮಾಡಿವೆ. ಆದರೆ, ಕರ್ನಾಟಕದಲ್ಲಿ ಮಾತ್ರ ಅಂತಹ ಕಾನೂನು ಜಾರಿ ಮಾಡಿಲ್ಲ. ಕರ್ನಾಟಕ ಸರ್ಕಾರ ವರದಿ ಜಾರಿಗೆ ಮುಂದಾಗಿಲ್ಲ. ಮುಂದಿನ ರಾಜ್ಯ ಬಜೆಟ್‌ನಲ್ಲಾದರೂ ವರದಿಯನ್ನು ಜಾರಿಗೆ ತರುವ ಮೂಲಕ ಕನ್ನಡಿಗರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.

ಕರವೇ ಸ್ವಾಭಿಮಾನಿ ಸೇನೆಯ ಟಿ.ಪಿ.ತಿಮ್ಮೇಗೌಡ, ಜೆ.ಎಂ.ಚಂದು, ಬಿ.ಒ.ಚಂದ್ರಶೇಖರ್, ಕೆ.ಎಸ್.ಅಭಿಷೇಕ್, ರಮೇಶ್, ಸಚ್ಚಿನ್‌ಗೌಡ, ರಂಜನ್ ಇತರರಿದ್ದರು.

ಕದಂಬ ಸೈನ್ಯ ಪ್ರತಿಭಟನೆ: ಬಂದ್‌ಗೆ ಬೆಂಬಲ ಸೂಚಿಸದ ಕದಂಬ ಸೈನ್ಯದ ಕಾರ್ಯಕರ್ತರು ಕನ್ನಡಿಗರ ಉದ್ಯೋಗ ಮೀಸಲಾತಿಗಾಗಿ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಸದನದಲ್ಲಿ ಮಂಡಿಸಿ ಕಾಯ್ದೆಯಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಡಿಸಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಯಾಗದಿದ್ದರೆ ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ಮರಣಶಾಸನವಾಗಲಿದ್ದು, ಮತ್ತೊಂದು ಗೋಕಾಕ್ ಮಾದರಿ ಚಳವಳಿ ನಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು. 2017ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲಿಸಿದಾಗ ಸಿ ಮತ್ತು ಡಿ ದರ್ಜೆ ನೌಕರರಿಗೆ ಶೇ.100ರಷ್ಟು ಆದ್ಯತೆ ನೀಡಿ ಅಧಿಸೂಚನೆ ಹೊರಬಂದಿತ್ತಷ್ಟೇ. ಖಾಸಗಿ ಉದ್ಯಮಗಳು ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿದರೆ, ಕನಿಷ್ಠ ವೇತನ ಸೇರಿದಂತೆ ಕಾರ್ಮಿಕ ಕಾನೂನಿನ ಅನುಸಾರ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಬೇಕಾಗುತ್ತದೆ. ನೀಡದಿದ್ದರೆ ಕನ್ನಡಿಗರ ಸಂಘಟನಾತ್ಮಕ ಹೋರಾಟಕ್ಕೆ ತುತ್ತಾಗಬೇಕಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಸೈನ್ಯದ ಸಂಸ್ಥಾಪಕ ಬೇಕರಿ ರಮೇಶ್, ಉಪಾಧ್ಯಕ್ಷ ಡಾ.ದೇವನಹಳ್ಳಿ ದೇವರಾಜು, ಮುಖಂಡರಾದ ಶಿವಕುಮಾರ್, ನಾಗೇಂದ್ರ, ಪ್ರಕಾಶ್, ಸಂತೋಷ್ ಕಾಂಬಳೆ, ಕಾಂತರಾಜು, ರಮೇಶ್, ಉಮ್ಮಡಹಳ್ಳಿ ನಾಗೇಶ ಇತರರಿದ್ದರು.