ಜಿಲ್ಲೆ

ಶಿಷ್ಯವೇತನ ಹೆಚ್ಚಿಸಲು ಸ್ಥಾನಿಕ ವೈದ್ಯರ ಆಗ್ರಹ

ಬೆಂಗಳೂರು: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಾನಿಕ ವೈದ್ಯರ ಶಿಷ್ಯವೇತನವನ್ನು (ಮಾಸಿಕ ಭತ್ಯೆ) ಹೆಚ್ಚಿಸಬೇಕು ಎಂದು ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್‌ (ಕೆಎಆರ್‌ಡಿ) ಸರ್ಕಾರವನ್ನು ಆಗ್ರಹಿಸಿದೆ.

ಶಿಷ್ಯವೇತನ ಹೆಚ್ಚಳ ಸಂಬಂಧ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಮೌನ ವಹಿಸಿದೆ. ಇದರಿಂದ ಸ್ಥಾನಿಕ ವೈದ್ಯರು ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕವಾಗಿ ಒತ್ತಡಕ್ಕೆ ಸಿಲುಕಿದ್ದಾರೆ. ಇದರ ಪರಿಣಾಮ ನೇರವಾಗಿ ರೋಗಿಗಳ ಆರೈಕೆಯ ಮೇಲೆ ಆಗಲಿದೆ. 24ರಿಂದ 48 ಗಂಟೆಗಳ ಕಾಲ ವಿರಾಮವಿಲ್ಲದೆ ಕೆಲಸ ಮಾಡುತ್ತಿರುವ ವೈದ್ಯರು ಅರ್ಹತೆಗಿಂತ ಕಡಿಮೆ ಶಿಷ್ಯವೇತನ ಪಡೆಯುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ವಹಿಸಬೇಕು ಎಂದು ಕೆಎಆರ್‌ಡಿ ಅಧ್ಯಕ್ಷ ಡಾ. ಸಿರೀಶ್ ಶಿವರಾಮಯ್ಯ ಒತ್ತಾಯಿಸಿದ್ದಾರೆ.

ಸಮಸ್ಯೆ ಪರಿಹರಿಸದಿದ್ದರೆ ರಾಜ್ಯಾದ್ಯಂತ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾನಿಕ ವೈದ್ಯರು ಪ್ರತಿಭಟನೆ ಕೈಗೊಳ್ಳಲಿದೆ. ಇದರಿಂದ ಹೌಸ್ ಸರ್ಜನ್, ಸ್ನಾತಕೋತ್ತರ ವಿದ್ಯಾರ್ಥಿಗಳು, ಸೂಪರ್ ಸ್ಪೆಷಾಲಿಟಿ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಎಲ್ಲ ತುರ್ತು ಅಲ್ಲದ ಸೇವೆಗಳನ್ನು ಅನಿರ್ದಿಷ್ಟ ಕಾಲದವರೆಗೆ ಸ್ಥಗಿತಗೊಳಿಸಲಾಗುವುದು. ರೋಗಿಗಳಿಗೆ ಆಗುವ ಸಮಸ್ಯೆಗಳಿಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇತರೆ ರಾಜ್ಯಗಳಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ ವೇತನ ಹೆಚ್ಚಳ ಮಾಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಹೋರಾಟ ಮಾಡದೆ ವೇತನ ಹೆಚ್ಚಳವಾಗಿರುವ ಉದಾಹರಣೆಯೇ ಇಲ್ಲ. ವಿದ್ಯಾರ್ಥಿಗಳ ಕಲಿಕಾ ಶುಲ್ಕ ಮಾತ್ರ ಕಾಲಕಾಲಕ್ಕೆ ಹೆಚ್ಚಳವಾಗುತ್ತದೆ. ಆದರೆ ಶಿಷ್ಯವೇತನ ಮಾತ್ರ ದೇಶದಲ್ಲೇ ಅತಿಕಡಿಮೆಯಿದೆ ಎಂದು ಡಾ. ಸಿರೀಶ್ ಶಿವರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.