ಜಿಲ್ಲೆ

ಜ್ಯೋತಿ, ಶಿವರಾಮುಗೆ ಕೃಷಿಕ ಪ್ರಶಸ್ತಿ, ಆರು ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ: ಸೆ.13ರಂದು ಪಟೇಲ್ ಚಾರಿಟಬಲ್ ಟ್ರಸ್ಟ್‌ನಿಂದ ಪ್ರದಾನ

ಕೆ.ಎನ್.ರಾಘವೇಂದ್ರ

ಮಂಡ್ಯ: ಕರ್ನಾಟಕ ಸಂಘದ ಸಹಯೋಗದೊಂದಿಗೆ ಪಟೇಲ್ ಚಾರಿಟಬಲ್ ಟ್ರಸ್ಟ್‌ನಿಂದ ವೀರ ಸೈನಿಕ ಆರ್.ಲೋಕೇಶ್ ಜ್ಞಾಪಕಾರ್ಥ ಕೊಡಮಾಡುವ ನಾಲ್ಕನೇ ವರ್ಷದ ವಿದ್ಯಾರ್ಥಿ ಪುರಸ್ಕಾರಕ್ಕೆ ಆರು ಜನರನ್ನು ಆಯ್ಕೆ ಮಾಡಲಾಗಿದೆ. ಅಂತೆಯೇ ಮೊದಲ ವರ್ಷದ ನಿಂಗಮ್ಮ ಪಟೇಲರ ಜೋಗಿಗೌಡ ಕೃಷಿ ಪ್ರಶಸ್ತಿಗೆ ನಾಗಮಂಗಲ ತಾಲೂಕು ತಟ್ಟಹಳ್ಳಿ ಗ್ರಾಮದ ದಂಪತಿ ಟಿ.ಕೆ.ಶಿವರಾಮು ಮತ್ತು ಜ್ಯೋತಿ ಪಾತ್ರರಾಗಿದ್ದಾರೆ.

ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಂಘದ ನಿರ್ದೇಶಕ ಜಯರಾಮು ಕೋಣನಹಳ್ಳಿ ಮತ್ತು ಟ್ರಸ್ಟ್‌ನ ಕಾರ್ಯದರ್ಶಿ ಜೆ.ರಾಜಶೇಖರಯ್ಯ, ಸೆ.13ರಂದು ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಮೈಸೂರಿನ ವೈದ್ಯಕೀಯ ಸಂಸ್ಥೆಯ ಭಗವಂತ್ರಾಯ ಕಲ್ಲೂರ, ಕೆ.ಆರ್.ಪೇಟೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಶಂಕರ ಬಳಗಾನೂರು, ಹಾಸನ ಪಶು ವೈದ್ಯಕೀಯ ಸಂಸ್ಥೆಯ ಎಂ.ವಿ.ಜನನಿ, ಬೆಂಗಳೂರು ಕೃಷ್ಣದೇವರಾಯ ದಂತ ವೈದ್ಯಕೀಯ ಕಾಲೇಜಿನ ಡಿ.ಎಸ್.ರಾಹುಲ್, ಮಂಡ್ಯ ವಿ.ಸಿ ಫಾರ್ಮ್ ಕೃಷಿ ವಿಜ್ಞಾನ ಸಂಸ್ಥೆಯ ತಾಜುದ್ದೀನ್ ಮತ್ತು ಮೈಸೂರು ಎನ್‌ಐಇ ಇಂಜಿನಿಯರಿಂಗ್ ಕಾಲೇಜಿನ ಸುಶ್ಮಿತಾ ಜತೆಗೆ ಟಿ.ಕೆ.ಶಿವರಾಮು ಮತ್ತು ಜ್ಯೋತಿ ದಂಪತಿಗೆ ತಲಾ 25 ಸಾವಿರ ರೂ ನಗದನ್ನು ಪ್ರದಾನ ಮಾಡಲಾಗುವುದು ಎಂದರು.

ಬಡತನದ ನಡುವೆಯೂ ಪ್ರತಿಭಾವಂತರಾಗಿರುವ ವಿದ್ಯಾರ್ಥಿಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಇವರ ಹೆಸರನ್ನು ಆಯಾಯಾ ಕಾಲೇಜಿನ ಆಡಳಿತ ಮಂಡಳಿಯೇ ನೀಡಿದೆ. ಇದಲ್ಲದೆ ಸಮಾರಂಭದ ಅಂಗವಾಗಿ ವೈಚಾರಿಕ ಕೃತಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ 10 ಜನ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂ ಬಹುಮಾನ ನೀಡಲಾಗುವುದು. ಅಂದು ಸಂಜೆ 5ಗಂಟೆಗೆ ಆಯೋಜಿಸಿರುವ ಸಮಾರಂಭದ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ. ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಪ್ರಶಸ್ತಿ ಹಾಗೂ ವಿದ್ಯಾರ್ಥಿ ಪುರಸ್ಕಾರ ನೀಡಲಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.

ಕರ್ನಾಟಕ ಸಂಘದ ನಿರ್ದೇಶಕ ನಾಗಪ್ಪ ಹನಕೆರೆ, ಕಾರ್ಯದರ್ಶಿ ಎಚ್.ಡಿ.ಸೋಮಶೇಖರ್, ವಿಜಯಲಕ್ಷ್ಮೀ ರಘುನಂದನ್, ಮಿಮ್ಸ್ ನಿವೃತ್ತ ಪಿಆರ್‌ಒ ಉಮೇಶ್ ಇದ್ದರು.