ಮಂಡ್ಯ: ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ರಾಜಕಾರಣಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರ ನಿಲುವನ್ನು ಪ್ರಶ್ನಿಸಬೇಕಿದೆ. ಶೀಘ್ರವಾಗಿ ಈ ಸಂಬಂಧ ಮಾತನಾಡಿ, ಹಾಸನದ ರಾಜಕಾರಣಿಗಳ ರಾಜಕಾರಣಿಗಳ ಬಾಯಿ ಮುಚ್ಚಿಸಿ ನಿಲುವು ಘೋಷಿಸುವಂತೆ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಒತ್ತಾಯಿಸಿದರು.
ಎಚ್.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದ ಬಗ್ಗೆ ಅತ್ಯಂತ ಪ್ರಶಂಸನೀಯವಾಗಿ ಮಾಡುಗಳನ್ನಾಡಿದ್ದಾರೆ. ಹಾಸನ ಮತ್ತು ಮಂಡ್ಯ ತಮ್ಮೆರಡು ಕಣ್ಣುಗಳೆಂದು, ರಾಜಕೀಯ ಪುನರ್‌ಜನ್ಮ ನೀಡಿದ್ದು ಮಂಡ್ಯ ಜಿಲ್ಲೆ ಎಂತಲೂ ಹಾಡಿ ಹೊಗಳಿದ್ದಾರೆ. ಹೀಗಿರುವಾಗಿ ಹಾಸನ ಕೃಷಿ ಕಾಲೇಜು ಮಂಡ್ಯಕ್ಕೆ ಬರುವುದನ್ನು ತಡೆಯುವುದು ಮಂಡ್ಯಕ್ಕೆ ಮಾಡುವ ಅಪಚಾರ. ರಾಜಕೀಯವಾಗಿ ಮಂಡ್ಯ ಜಿಲ್ಲೆ ದೇವೇಗೌಡರ ಕುಟುಂಬ ಪೋಷಿಸುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿ.ಸಿ ಫಾರ್ಮ್‌ನಲ್ಲಿ ಕೃಷಿ ವಿವಿ ಸ್ಥಾಪನೆ ಮಾಡಿರುವುದು ಅಭಿನಂದನಾರ್ಹ. ಇದರ ವಿವಿ ವ್ಯಾಪ್ತಿಗೆ ಚಾಮರಾಜನಗರ, ಮೈಸೂರು, ಕೊಡಗು, ಹಾಸನ ಜಿಲ್ಲೆ ಒಳಗೊಳ್ಳಲಿದೆ. ಆದರೆ ಹಾಸನದ ರಾಜಕಾರಣಿಗಳು ಬೆಂಗಳೂರು ವಿವಿಯಲ್ಲೇ ಕೃಷಿ ಕಾಲೇಜು ಮಾನ್ಯತೆ ಮುಂದುವರೆಸಲು ಶಾಸನ ಸಭೆಯಲ್ಲಿ ಪ್ರತಿಪಾದಿಸಿ ರಾಜ್ಯಪಾಲರಿಗೆ ಮನವಿ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಕೃಷಿ ವಿವಿ ಸ್ಥಾಪನೆಗೂ ಮುನ್ನವೇ ಕೋಲ್ಮನ್ ಅವರು ವಿ.ಸಿ ಫಾರ್ಮ್ ಅನ್ನು ಸಂಶೋಧನಾ ಕೇಂದ್ರವನ್ನಾಗಿ ರೂಪಿಸಿದ್ದರು. ಅಂತೆಯೇ ಆಗಲೇ 600 ಎಕರೆ ಭೂ ಪ್ರದೇಶ ನೀಡಿದ ಮೈಸೂರು ಅರಸರನ್ನು ಮರೆಯುವಂತಿಲ್ಲ. ವಿ.ಸಿ ಫಾರ್ಮ್‌ನಲ್ಲಿ ನಡೆದಿರುವ ಸಂಶೋಧನೆಗೆ ವಿಶ್ವಮಾನ್ಯತೆ ದೊರೆತಿದ್ದು, ಜಾಗತಿಕ ಪೆಟೆಂಟ್ ಕೂಡ ಲಭಿಸಿದೆ. ಇಂತಾದರೂ ಹಾಸನ ಜಿಲ್ಲೆಯನ್ನು ಮಂಡ್ಯ ಕೃಷಿ ವಿವಿ ಹೊರಗುಳಿಯುವಂತೆ ಮಾಡಲು ಎಚ್.ಡಿ.ರೇವಣ್ಣ ನೇತೃತ್ವದಲ್ಲಿಯೇ ಮನವಿ ಸಲ್ಲಿಸಲು ಮುಂದಾಗಿರುವುದು ಅಘಾತವನ್ನುಂಟು ಮಾಡಿದೆ ಎಂದರು.
ಇನ್ನು ಮಂಡ್ಯ ವಿಶ್ವವಿದ್ಯಾಲಯ ಮೈಸೂರು ವಿಶ್ವವಿದ್ಯಾಲಯಕ್ಕೆ ವಿಲೀನಗೊಳಿಸುವ ಸರ್ಕಾರದ ಪ್ರಸ್ತಾವನೆಗೆ ವಿರುದ್ಧವಾಗಿ ಶಾಸಕ ರವಿಕುಮಾರ್ ಬದ್ದತೆ ಹಾಗೂ ಒಲವು ಪ್ರಶಂಸನೀಯ. ಅದನ್ನು ಉಳಿಸಿ ಬೆಳೆಸುವ ಅಗತ್ಯ ಎಲ್ಲರ ಮೇಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಈ ನಿಟ್ಟಿನಲ್ಲಿ ಕಾರ್ಯಪ್ರೌವೃತ್ತರಾಗಿ ಎರಡೂ ವಿವಿಗಳನ್ನು ಉಳಿಸಿ ಬೆಳೆಸಲು ತೊಡಗಿಕೊಳ್ಳುವಂತೆ ಆಗ್ರಹಿಸಿದರು.
ಕಸಾಪ ಮಾಜಿ ಅಧ್ಯಕ್ಷ ಸೋಮಶೇಖರ್ ಇದ್ದರು.