ಜಿಲ್ಲೆ

ಸಮಗ್ರ ವೀರಾಗ್ರಣಿ ತಂಡವಾಗಿ ಕರ್ನಾಟಕ

Gadag

ಗದಗ: 17ನೇ ರಾಷ್ಟ್ರೀಯ ಸೀನಿಯರ್, ಜೂನಿಯರ್ ಮತ್ತು ಸಬ್ ಜೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್​ಶಿಪ್ ಅಂಗವಾಗಿ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಫೆ. 18ರಿಂದ ನಾಲ್ಕು ದಿನ ಕಾಲ ಜರುಗಿದ ಸೈಕ್ಲಿಂಗ್ ಚಾಂಪಿಯನಶಿಪ್​ನಲ್ಲಿ ಕರ್ನಾಟಕದ ತಂಡವು ಸಮಗ್ರ ವೀರಾಗ್ರಣಿ ತಂಡವಾಗಿ ಹೊರಹೊಮ್ಮಿತು.

95 ಪಾಯಿಂಟ್​ಗಳ ಮೂಲಕ ಕರ್ನಾಟಕ ಅಗ್ರಸ್ಥಾನ ಗಳಿಸಿದೆ. ಅಲ್ಲದೆ, ಬಾಲಕ ವಿಭಾಗದಲ್ಲಿ ಕರ್ನಾಟಕದ (ಮೈಸೂರು ಮೂಲದ) ಸೈಕ್ಲಿಸ್ಟ್ ಅಡೋನಿಸ್ ಕೆ.ತಂಗಪು, ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟದ ಪ್ರಣೀತಾ ಸೋಮನ್ ಬೆಸ್ಟ್ ಸೈಕ್ಲಿಸ್ಟ್ ಗಳಾಗಿ ಹೊರಹೊಮ್ಮಿದ್ದಾರೆ.

ತಾಲೂಕಿನ ಅಸುಂಡಿಯ ಕುವೆಂಪು ಮಾದರಿ ಸರ್ಕಾರಿ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು, ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ. ಸೂರ್ಯಸೇನ್, ರಾಜ್ಯ ಅಸುಂಡಿ ಗ್ರಾಪಂ ಅಧ್ಯಕ್ಷೆ ಜಯಶ್ರೀ ಅಣ್ಣಿಗೇರಿ, ಉಪಾಧ್ಯಕ್ಷ ಭೀಮಪ್ಪ ಪೂಜಾರ, ರಾಜ್ಯ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷ ಶ್ರೀಧರ ಘೊರೆ, ರಾಜ್ಯ ಸೈಕ್ಲಿಂಗ ಸಂಸ್ಥೆ ಉಪಾಧ್ಯಕ್ಷರಾದ ಚನ್ನಪ್ಪ ಜಗಲಿ, ಜಿ.ವಿ. ಪಾಟೀಲ, ಕಾರ್ಯದರ್ಶಿ ಎಸ್.ಎಂ. ಕುರಣಿ, ಗದಗ ಜಿಲ್ಲಾ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷ ರವಿಕುಮಾರ ಮರಲಿಂಗಣ್ಣವರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಬಿ. ವಿಶ್ವನಾಥ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿಠ್ಠಲರಾವ್, ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ವಿಜೇತ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.