ಬೆಂಗಳೂರು: ರಾಜ್ಯದ ಎಲ್ಲಾ ಸರಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ‘ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’(ಕೆಎಎಸ್‌ಎಸ್)ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸಾಸ್ಟ್) ಮೂಲಕ ಅನುಷ್ಠಾನಗೊಳ್ಳಲಿರುವ ಈ ಯೋಜನೆಗೆ ಸರಕಾರಿ ನೌಕರರ ವೇತನದಿಂದ ಮಾಸಿಕ ವಂತಿಕೆ ಕಡಿತಗೊಳಿಸಲಾಗುವುದು. ಅಕ್ಟೋಬರ್ 2025ರ ವೇತನದಿಂದ ಈ ವಂತಿಕೆ ಕಡಿತ ಆರಂಭವಾಗಲಿದೆ.
ಗ್ರೂಪ್ ಎ: ನೌಕರರಿಂದ ಮಾಸಿಕ 1,000 ರೂ., ಗ್ರೂಪ್ ಬಿ: 500 ರೂ., ಗ್ರೂಪ್ ಸಿ: 350 ರೂ., ಹಾಗೂ ಗ್ರೂಪ್ ಡಿ: ಸಿಬ್ಬಂದಿಯಿಂದ 250 ರೂ. ಕಡಿತವಾಗಿಲಿದೆ. ಸರಕಾರಿ ನೌಕರರ ವೇತನದಿಂದ ಕಡಿತಗೊಂಡ ವಂತಿಕೆಯನ್ನು ಎಲ್ಲ ಡಿಡಿಒಗಳು (ವೇತನ ವಿತರಣಾ ಅಧಿಕಾರಿಗಳು) ಖಜಾನೆ-2 ಮೂಲಕ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಬ್ಯಾಂಕ್ ಖಾತೆ ವಿವರಗಳನ್ನು ಎಚ್‌ಆರ್‌ಎಂಎಸ್ ಮೂಲಕ ಡಿಡಿಒಗಳಿಗೆ ತಿಳಿಸಲಾಗುವುದು ಎಂದು ಆದೇಶದಲ್ಲಿ ಹೇಳಿದೆ.
ಪತಿ/ಪತ್ನಿ ಇಬ್ಬರೂ ಸರಕಾರಿ ನೌಕರರಾಗಿದ್ದಲ್ಲಿ, ಅವರಿಬ್ಬರಲ್ಲಿ ಒಬ್ಬರು ಮಾತ್ರ ವಂತಿಕೆ ಪಾವತಿಸುವ ಬಗ್ಗೆ ತಾವೇ ನಿರ್ಧರಿಸಿ, ಸಂಬಂಧಪಟ್ಟ ಡಿಡಿಒಗೆ ಮಾಹಿತಿ ನೀಡಬೇಕು. ಎಚ್‌ಆರ್‌ಎಂಎಸ್ ವ್ಯಾಪ್ತಿಯಲ್ಲಿ ಇಲ್ಲದ (ಇತರ ಇಲಾಖೆಗಳು, ಸಾರ್ವಜನಿಕ ಸಂಸ್ಥೆಗಳಲ್ಲಿ ನಿಯೋಜನೆ, ಅನ್ಯ ಸೇವೆ) ನೌಕರರು ತಮ್ಮ ಮಾಸಿಕ ವೇತನದಲ್ಲಿ ವಂತಿಕೆ ಕಡಿತಗೊಳಿಸಿ, ಸಂಸ್ಥೆಯಿಂದ ನೇರವಾಗಿ ಟ್ರಸ್ಟ್‌ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬಹುದು ಎಂದು ತಿಳಿಸಲಾಗಿದೆ.
ಸರಕಾರಿ ನೌಕರರ ತಂದೆ ಮತ್ತು ತಾಯಿಯ ಮಾಸಿಕ ಆದಾಯವನ್ನು 17 ಸಾವಿರದ ಬದಲಿದೆ, 27 ಸಾವಿರವೆಂದು ಪರಿಷ್ಕರಿಸಲಾಗಿದೆ. ಯಾವುದೇ ನೌಕಕರು ಈ ಯೋಜನೆಗೆ ಒಳಪಡಲು ಇಚ್ಚಿಸದಿದ್ದರೆ ಅ.18ರೊಳಗೆ ಲಿಖಿತ ರೂಪದಲ್ಲಿ ಡಿಡಿಗಳಿಗೆ ಮಾಹಿತಿ ಸಲ್ಲಿಸಬೇಕು. ಒಂದುವೇಳೆ ಲಿಖಿತ ರೂಪದಲ್ಲಿ ಮಾಹಿತಿ ಸಲ್ಲಿಸದಿದಲ್ಲಿ ನೌಕಕರು ಯೋಜನೆಯ ವ್ಯಾಪ್ತಿಗೆ ಒಳಪಡುವರೆಂದು ಪರಿಗಣಿಸಲಾಗುತ್ತದೆ.
ಇನ್ನು ಯೋಜನೆ ಅಳಡಿಸಿಕೊಳ್ಳು ಇಚ್ಚಿಸುವ ಖಾಸಗಿ ಆಸ್ಪತ್ರೆಗಳೊಂದಿದೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಸರಕಾರ ನಿಗದಿಪಡಿಸಿರುವ ಒಡಂಬಡಿಕೆ ಮಾಡಿಕೊಂಡು ಸೌಲಭ್ಯ ಕಲ್ಪಿಸಲಿದೆ. ಈ ಯೋಜನೆಯು ರಾಜ್ಯ ಸರಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ನಗದು ರಹಿತವಾಗಿ ಪಡೆಯಲು ಸಹಾಯಕವಾಗಲಿದೆ. ಯೋಜನೆ ಜಾರಿಗೆ ಬರುವ ದಿನದಿಂದಲೇ ಇದರ ಪ್ರಯೋಜನಗಳು ಲಭ್ಯವಾಗಲಿವೆ ಎಂದು ಆದೇಶದಲ್ಲಿ ಹೇಳಿದೆ.