ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಕೊಡಗಿನ ಮೂವರು ಪ್ರಬಲ ಆಕಾಂಕ್ಷಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ೨೦೨೩ ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ರಾಜ್ಯ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಕುತೂಹಲ ಮೂಡಿದೆ.
ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡ ಹಾಗೂ ವಿಧಾನಸಭೆ ಅಧ್ಯಕ್ಷರಾಗಿದ್ದ ಕೆ.ಜಿ. ಬೋಪಯ್ಯ ಅವರ ಮುತುವರ್ಜಿಯಿಂದ ಅರೆಭಾಷೆ ಅಕಾಡೆಮಿ ಸ್ಥಾಪನೆಗೊಂಡಿದೆ. ಸ್ಥಾಪಕಾಧ್ಯಕ್ಷರಾಗಿ ಸಂಪಾಜೆ ನಿವಾಸಿಯಾಗಿದ್ದ ಹಿರಿಯರಾದ ಎನ್.ಎಸ್. ದೇವಿಪ್ರಸಾದ್ ಜವಾಬ್ದಾರಿ ನಿರ್ವಹಿಸಿದ್ದರು. ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದರಿಂದ ಹಾಗೂ ಹೊಂದಾಣಿಕೆ ಕೊರತೆಯಿಂದ ಪ್ರಥಮ ಅವಧಿಯಲ್ಲಿ ನಿರೀಕ್ಷಿತ ಕೆಲಸ ನಡೆದಿರಲಿಲ್ಲ.
೨ನೇ ಅವಧಿಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಕೊಲ್ಯದ ಗಿರೀಶ್ ಕಾರ್ಯನಿರ್ವಹಿಸಿದರು. ಹಳ್ಳಿಯಿಂದ ದಿಲ್ಲಿವರೆಗೆ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಗಮನ ಸೆಳೆದಿದ್ದರು. ಜಿಲ್ಲೆಯ ವಿವಿಧೆಡೆಯಲ್ಲಿ ಅಕಾಡೆಮಿ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಅರೆಭಾಷೆ ಅಕಾಡೆಮಿ ಎಲ್ಲರಿಗೂ ಪರಿಚಿತಗೊಳ್ಳುವಂತೆ ಮಾಡಿದರು.
೩ನೇ ಅವಧಿಯಲ್ಲಿ ಅಧ್ಯಕ್ಷರಾಗಿ ಸುಳ್ಯದ ಕಾಂಗ್ರೆಸ್ ಮುಖಂಡ ಪಿ.ಸಿ. ಜಯರಾಮ್ ಜವಾಬ್ದಾರಿ ನಿರ್ವಹಿಸಿದರು. ತಮ್ಮ ಇತಿಮಿತಿ ಒಳಗೆ ಅಕಾಡೆಮಿ ಕಾರ್ಯ ಚಟುವಟಿಕೆ ನಡೆಯುವಂತೆ ನೋಡಿಕೊಂಡರು. ೨ ಮತ್ತು ೩ನೇ ಅವಧಿ ರಾಜಕೀಯ ನೆಲೆಗಟ್ಟಿಯಲ್ಲಿ ಅಧ್ಯಕ್ಷರು, ಸದಸ್ಯರ ಆಯ್ಕೆ ನಡೆದಿತ್ತು.
೪ನೇ ಅವಧಿಯಲ್ಲಿ ಅಧ್ಯಕ್ಷರಾಗಿ ಸುಳ್ಯ ತಾಲೂಕು ವ್ಯಾಪ್ತಿಯ ಕಜೆಗದ್ದೆ ನಿವಾಸಿ ಲಕ್ಷ್ಮೀನಾರಾಯಣ ಕಜೆಗದ್ದೆ ಅಚ್ಚರಿಕರ ಆಯ್ಕೆಯಾಗಿದ್ದರು. ಸಂಘ ಪರಿವಾರ ಮುಖಂಡರ ಶ್ರೀರಕ್ಷೆಯಲ್ಲಿ ಆಯ್ಕೆಯಾಗುವುದರು. ಅಧ್ಯಕ್ಷ ಮತ್ತು ಸದಸ್ಯ ಸ್ಥಾನಕ್ಕೆ ಬಿಜೆಪಿ ಮಾಡಿದ್ದ ಶಿಫಾರಸ್ಸಿಗೆ ರಾಜ್ಯ ಸರ್ಕಾರ ಮಾನ್ಯತೆ ನೀಡಿರಲಿಲ್ಲ.
ಕೋವಿಡ್ ನಡುವೆಯೂ ಪರಿಣಾಮಕಾರಿ ಮತ್ತು ಅರ್ಥಪೂರ್ಣ ಕಾರ್ಯ ಚಟುವಟಿಕೆ ಮಾಡುವುದರ ಮೂಲಕ ಲಕ್ಷ್ಮೀನಾರಾಯಣ ಕಜೆಗದ್ದೆ ಗಮನ ಸೆಳೆದರು. ಅರೆಭಾಷೆ ಅಕಾಡೆಮಿ ತಮ್ಮ ಕಾರ್ಯ ಚಟುವಟಿಕೆ ಮೂಲಕ ಎಲ್ಲರ ಗಮನ ಸೆಳೆಯುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ೫ನೇ ಅಧ್ಯಕ್ಷರಿಗೆ ಅಕಾಡೆಮಿ ಹೊಂದಿರುವ ಹೆಸರು ಉಳಿಸಿಕೊಳ್ಳುವ ದೊಡ್ಡ ಸವಾಲು ಇದೆ.
ಅಧ್ಯಕ್ಷ ಸ್ಥಾನಕ್ಕೆ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿರುವ ಆಮೆ ಕೆ. ಪಾಲಾಕ್ಷ, ಬಹುಮುಖ ಪ್ರತಿಭೆ ಡಾ.ಕುಶ್ವಂತ್ ಕೋಳಿಬೈಲು, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಹಿರಿಯರಾಗಿರುವ ನನಗೊಂದು ಅವಕಾಶ ನೀಡಬೇಕೆಂದು ಪಾಲಾಕ್ಷ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದಾರೆ.
ಕಳೆದ ಅವಧಿಯಲ್ಲಿ ಮನೋಹರ್ ಮಾದಪ್ಪ ಅಧ್ಯಕ್ಷ ಸ್ಥಾನದ ಸನಿಹಕ್ಕೆ ಬಂದಿದ್ದರು. ಬಹುತೇಕ ಅವರ ಆಯ್ಕೆ ಖಚಿತವಾಗಿತ್ತು. ಅಂತಿಮ ಕ್ಷಣದಲ್ಲಿ ನಡೆದ ವಿದ್ಯಮಾನಗಳಿಂದ ಅಧ್ಯಕ್ಷ ಸ್ಥಾನದಿಂದ ವಂಚಿತರಾದರು. ಅರೆಭಾಷೆ ಗೌಡ ಯುವಕ- ಯುವತಿಯರನ್ನು ಸಂಘಟಿಸುವು ದರ ಮೂಲಕ ಪರಿಣಾಮಕಾರಿ ಕಾರ್ಯ ನಡೆಸಿದ ಹೆಗ್ಗಳಿಕೆ ಮನೋಹರ್ ಮಾದಪ್ಪಗೆ ಸಲ್ಲುತ್ತದೆ. ಅದೇ ಮಾನದಂಡದಡಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಮೇಜರ್ ಡಾ.ಕುಶ್ವಾಂತ್ ಕೋಳಿಬೈಲು ಬಹುಮುಖ ಪ್ರತಿಭೆ. ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು ಪುಸ್ತಕ ಬರೆಯುವುದರ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕವಿತೆ, ಬರಹಗಳ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕಳೆದ ಅವಧಿಯಲ್ಲಿ ಅಕಾಡೆಮಿ ಸದಸ್ಯತ್ವಕ್ಕೆ ಪ್ರಯತ್ನಿಸಿದ್ದರು. ಪ್ರಸ್ತುತ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿರುವ ಕೆ.ಜಿ. ಬೋಪಯ್ಯ ಅವರ ಪರಮಾಪ್ತ ಬಳಗದಲ್ಲಿರುವ ಡಾ.ಕುಶ್ವಂತ್ ಈ ಬಾರಿ ಅಕಾಡೆಮಿ ಅಧ್ಯಕ್ಷ ಸ್ಥಾನ ಅಲಂಕರಿಸುವ ನಿರೀಕ್ಷೆ ಮೂಡಿದೆ. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಸಂಪರ್ಕ ಒದಗಿರುವುದು ಇವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ನೇಮಕಾತಿ ಬಗ್ಗೆ ಕುತೂಹಲ
ಏಪ್ರಿಲ್ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕೇವಲ ೬ ತಿಂಗಳ ಅವಧಿಗೆ ಅಕಾಡೆಮಿಗೆ ಸರ್ಕಾರ ನೇಮಕಾತಿ ಮಾಡಲಿದೆ ಯೇ ಎಂಬ ಕುತೂಹಲ ಮೂಡಿದೆ. ಚುನಾವಣೆ ಸಮಯದಲ್ಲಿ ನೇಮಕಾತಿ ಗೊಂದಲದಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕವೂ ಇದೆ. ಇದರೊಂದಿಗೆ ಅಧ್ಯಕ್ಷರು, ಸದಸ್ಯರ ನೇಮಕಾತಿ ಮಾಡುವುದರ ಮೂಲಕ ಒಂದಿಷ್ಟು ಜನರಿಗೆ ಅವಕಾಶ ಮಾಡಿಕೊಟ್ಟಂತಾ ಗುತ್ತದೆ ಎಂಬ ಚರ್ಚೆಯೂ ಇದೆ.
ಮೂರು ವರ್ಷ ಅಥವಾ ಮುಂದಿನ ಆದೇಶದವರೆಗೆ ಎಂದು ನೇಮಕಾತಿ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿರುತ್ತದೆ. ಹೊಸ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಕೂಡ ಅಕಾಡೆಮಿಗೆ ನೇಮಕಗೊಂಡವರ ಭವಿಷ್ಯ ನಿರ್ಧರಿಸುತ್ತದೆ. ಅಲ್ಪಾವಧಿಗೆ ಅಧ್ಯಕ್ಷ, ಸದಸ್ಯರಾಗಲು ಹಲವರು ನಿರಾಸಕ್ತಿ ತೋರುತ್ತಿದ್ದಾರೆ.
ಅಲ್ಪಾವಧಿಯಲ್ಲಿಯೂ ಉತ್ತಮ ಕೆಲಸ ಮಾಡುವುದರ ಮೂಲಕ ಛಾಪು ಮೂಡಿಸುವ ಹಂಬಲದೊಂದಿಗೆ ಅಧ್ಯಕ್ಷ, ಸದಸ್ಯ ಸ್ಥಾನಕ್ಕೆ ಹಲವರು ಪೈಪೋಟಿ ನಡೆಸುತ್ತಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರ ಅಚ್ಚರಿ ಆಯ್ಕೆ ಮಾಡಲಿದೆಯೇ ಎಂಬ ಕುತೂಹಲ ಇದೆ.