ಜಿಲ್ಲೆ

ಕರ್ನಾಟಕ 2ನೇ  ವೆಸ್ಟ್​ಬೆಂಗಾಲ್​!

ರೇಷ್ಮೆ ನಗರ ಡೆಸ್ಕ್

ಮಾಗಡಿ: ಕರ್ನಾಟಕ 2ನೇ ಪಶ್ಚಿಮ ಬಂಗಾಲ ಆಗಿದೆ. ಪ್ರತಿ ನಿತ್ಯ ಕೊಲೆ, ಸುಲಿಗೆ, ದೌರ್ಜನ್ಯ,ಅತ್ಯಾಚಾರ, ದ್ವೇಷ ರಾಜಕಾರಣ, ರೈತರ ಆತ್ಮಹತ್ಯೆಗಳು ನಡೆಯುತ್ತಿವೆೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ ಗೌಡ ಆರೋಪಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ವಿಕಸಿತ ಭಾರತದ ಅಮೃತ ಕಾಲ ಸೇವೆ, ಸುಶಾಸನ, ಬಡವರ ಕಲ್ಯಾಣದ ಮೋದಿ ಸಕಾರಕ್ಕೆ 11 ವರ್ಷದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳನ್ನು ನೋಡಿಕೊಂಡು ಬಂದು ಸಿದ್ದರಾಮಯ್ಯ ಕೆಲಸ ಮಾಡಲಿ ಎಂದು ಟೀಕಿಸಿದರು.

ಕಿಸಾನ್​ ಸನ್ಮಾನ್​ ಯೋಜನೆಯಡಿ ಕೇಂದ್ರ 58 ಲಕ್ಷ ರೈತರಿಗೆ 13ಸಾವಿರದ 690 ಕೋಟಿ ರೂ. ನೇರವಾಗಿ ನೀಡಲಾಗಿದೆ. ಸಲುವಿಮೆ ಯೋಜನೆ ಕೇಂದ್ರ ಸರ್ಕಾರದ್ದು, ರಾಜ್ಯಸರ್ಕಾರದ್ದಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರತಿ ರೈತರಿಗೆ 4 ಸಾವಿರ ನೀಡುತ್ತಿದ್ದರು. ಅದನ್ನು ನಿಲ್ಲಿಸಿ ರೈತರನ್ನು ಕಡೆಗಣಿಸಿದ್ದಾರೆ.

ಸ್ಮಾರ್ಟ್​ ಸಿಟಿ, ಸ್ವಚ್ಛಭಾರತ್​ ಯೋಜನೆ, 12 ಕೋಟಿ ಶೌಚಗೃಹ ನಿರ್ಮಾಣ, ಮುದ್ರಾ ಯೋಜನೆ, ಜೆಜೆಎಂಎಂ ಯೋಜನೆಯಡಿ ಕರ್ನಾಟಕದ ಪ್ರತಿ ಮನೆಗೆ ಕುಡಿಯುವ ನೀರಿಗಾಗಿ 25 ಸಾವಿರ ಕೋಟಿ ರೂ. ಬಿಡುಗಡೆ ಸೇರಿ ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂ. ಕರ್ನಾಟಕಕ್ಕೆ ನೀಡಿದೆೆ.

ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ನೀಡುವ 100ರೂ.ನಲ್ಲಿ ರಾಜ್ಯಕ್ಕೆ 13 ರೂ. ಕೊಡುತ್ತಾರೆ ಎಂದು ಆರೋಪಿಸುತ್ತಾರೆ. ಹಾಗಾದರೆ ಕೇಂದ್ರ ಸರ್ಕಾರ ನೀಡುವ ಹಣಕ್ಕೆ ಲೆಕ್ಕ ಇಲ್ಲವೆ? ಮಹಿಳಾ ಸಬಲೀಕರಣ ಸೇರಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೇಂದ್ರ ಸರ್ಕಾರದ ಒಂದಲ್ಲಾ ಒಂದು ಯೋಜನೆ ತಲುಪುತ್ತಿದೆ ಎಂದರು.

ಸಿದ್ದರಾಮಯ್ಯ ಸರ್ಕಾರದ 100 ದಿನ ಮುಗಿಯುವ ಮುನ್ನವೆ ಪಕ್ಷದಲ್ಲೇ ವಿರೋಧಿ ಅಲೆ ಆರಂಭವಾಗಿದೆ.

ಅಭಿವೃದ್ಧಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಎಲ್ಲ ಗ್ಯಾರಂಟಿಗೆ ಹೋಗುತ್ತಿದೆ ಎಂದು 20 ಶಾಸಕರು ಸಹಿ ಮಾಡಿರುವ ಪತ್ರವನ್ನು ಸಿಎಂಗೆ ಬರೆದಿದ್ದಾರೆ. ಈ ವೇಳೆ ಬಸವರಾಜ ರಾಯರೆಡ್ಡಿ, ಬಿ.ಆರ್​. ಪಾಟೀಲ್​ಗೆ ಅಧಿಕಾರ ನೀಡಿದರು ಎಂದು ಆರೋಪಿಸಿದರು.

ಕಂದಾಯ ಸಚಿವರೆ ತಾಲೂಕುಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಕೆಲಸ ಮಾಡಿಸುವ ಪರಿಸ್ಥಿತಿ ಇದೆ ಎಂದರು.

ಬಿಜೆಪಿ ಒಬಿಸಿ ರಾಜ್ಯ ಕೋಶಾಧ್ಯಕ್ಷ ಎ.ಎಚ್​. ಬಸವರಾಜು, ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ಬಿಜೆಪಿ ಅಧ್ಯಕ್ಷ ಎಂ. ವೀರಭದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್​. ರಾವೇಂದ್ರ, ತಾಲೂಕು ಪ್ರಧಾನ ಕಾರ್ಯದರ್ಶಿ ಬಜ್ಜ ಜಯರಾಮಯ್ಯ, ಜಿಲ್ಲಾ ಕಾರ್ಯದರ್ಶಿ ಶಶಿಧರ್​, ಹನುಮಂತೇಗೌಡ, ಚಿಕ್ಕೇಗೌಡ, ಹನುಮಂತನಾಯ್ಕ, ಕೆಂಚನಹಳ್ಳಿ ಕಿರಣ್​, ಧನುಷ್​, ಸಿದ್ದಪ್ಪ, ಮಾರಪ್ಪ, ಅಂಜು, ಶಂಕರಪ್ಪ, ಕನಕಪುರ ಮುತ್ತುರಾಜು, ಸಿದ್ದರಾಜು ಇತರರು ಇದ್ದರು.