ವಿಜಯವಾಣಿ ಸುದ್ದಿಜಾಲ ಗದಗ
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಆಗಿ 50 ವರ್ಷ ಕಳೆದ ಹಿನ್ನೆಲೆ ನಂ.1 ರಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಅದ್ಧೂರಿ ಕಾರ್ಯಕ್ರಮ ನಡೆಯಲಿವೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು
ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು. ನಂ.1 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನ.೨ ರಂದು ಹಂಪಿಯ ವಿರೂಪಾಕ್ಷ ದೇವರ ದೇವಸ್ಥಾನದಿಂದ ಜ್ಯೋತಿ ಪ್ರಜ್ವಲಿಸಿ, ಕೊಪ್ಪಳ ಮಾರ್ಗವಾಗಿ ಗದಗ ನಗರದ ವೀರನಾರಾಯಣ ದೇವಸ್ಥಾನಕ್ಕೆ ಜ್ಯೋತಿ ಆಗಮಿಸಲಿದೆ. ನ.೩ ರಂದು ವೀರನಾರಾಯಣ ದೇವಸ್ಥಾನದಿಂದ ನಗರದ ವಿವಿಧ ಮಾರ್ಗದ ಮೂಲಕ ಕಾಟನ್ ಸೇಲ್ ಸೊಸೈಟಿಗೆ ಮೆರವಣಿಗೆ ಮೂಲಕ ಜ್ಯೋತಿ ಆಗಮಿಸಲಿದ್ದು, ಬಹಿರಂಗ ಕಾರ್ಯಕ್ರಮ ಜರುಗಲಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
1961 ರಲ್ಲಿ ನಗರದಲ್ಲಿ 43ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತದೆ. ಅದೇ ಸಮ್ಮೇಳನದಲ್ಲಿ ಸಾಹಿತಿಗಳು 'ಕರ್ನಾಟಕ' ನಾಮಕರಣ ಆಗಬೇಕೆಂದು ಸರ್ವಾನುಮತದಿಂದ ಸರ್ಕಾರವನ್ನು ಆಗ್ರಹಿಸುತ್ತಾರೆ. 1971 ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಆಗುತ್ತದೆ. ಹಾಗಾಗಿ, ಕರ್ನಾಟಕ ಎಂದು ನಾಮಕರಣ ಆಗಲು ಗದಗ ಜಿಲ್ಲೆಯ ಕೊಡುಗೆಯೂ ಅಧಿಕವಿದೆ. ಆ ಇತಿಹಾಸವನ್ನು ಮತ್ತೆ ಮೆಲಕು ಹಾಕಬೇಕಿದೆ. ಈ ಹಿನ್ನೆಲೆ 50 ವರ್ಷಗಳ ಹಿಂದೆ ನಡೆದ ಕಾರ್ಯಕ್ರಮಗಳನ್ನು ನ.೩ ರಂದು ಪುನರಪಿ ಮಾಡುತ್ತಿದ್ದೇವೆ. ಕಾರ್ಯಕ್ರಮದಲ್ಲಿ 50 ವರ್ಷದ ಹಿಂದಿನ ಭಾವಚಿತ್ರಗಳ ಗ್ಯಾಲರಿ ಏರ್ಪಾಟು ಮಾಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಂ.೩ ರಂದು ಸಿಎಂ ಸಿದ್ದರಾಮಯ್ಯ ಅವರು ಹಂಪಿಯಿಂದ ಟ್ರೈನ್ ಮೂಲಕ ಆಗಮಿಸುತ್ತಾರೆ. ವೀರನಾರಾಯಣ ದೇವಸ್ಥಾನದಲ್ಲಿ ಹಂಪಿಯಿಂದ ಆಗಮಿಸಿದ ಜ್ಯೋತಿಯನ್ನು ಸ್ವಾಗತಿಸುತ್ತಾರೆ ಎಂದರು.
ಪಕ್ಷಾತೀತವಾಗಿ ಎಲ್ಲರೂ ಮೆರವಣಿಗೆ, ಸಮಾರಂಭದಲ್ಲಿ ಭಾಗವಹಿಸಬೇಕು ಎಂದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ವಿಭೂತಿ, ಕ್ರೀಡಾ ಜಿಲ್ಲಾ ಅಧಿಕಾರಿ ಶರಣು ಗೋಗೇರಿ, ವಾರ್ತಾ ಇಲಾಖೆ ಅಧಿಕಾರಿ ವಸಂತ ಮಡ್ಲೂರ್ ಇದ್ದರು.