ಜಿಲ್ಲೆ

ಬಂಡವಾಳ ಪರ್ಯಾಪ್ತತಾ ಅನುಪಾತ, ಬ್ಯಾಂಕ್​ಗಳ ಸುರಕ್ಷತೆಯ ಮಾನದಂಡ: ಕರ್ಣಾಟಕ ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ

malli

ಮಂಗಳೂರು: ದೇಶ-ವಿದೇಶಗಳಲ್ಲಿ ಅನೂಚಾನ ವಾಗಿ ಪಾಲಿಸಿಕೊಂಡು ಬಂದಿರುವ ‘ಬಂಡವಾಳ ಪರ್ಯಾಪ್ತತಾ ಅನುಪಾತ’ವೇ ಬ್ಯಾಂಕ್​ಗಳ ಸುರಕ್ಷತೆಯ ಮಾನದಂಡವಾಗಿದೆಯೇ ಹೊರತು ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಅರ್ಥವಿಲ್ಲದ ‘ಎಂ-ಕ್ಯಾಪ್ ಅನುಪಾತ’ ಅಲ್ಲ ಎಂದು ಕರ್ಣಾಟಕ ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಸ್ಪಷ್ಟಪಡಿಸಿದ್ದಾರೆ.

ವಿದೇಶಗಳಲ್ಲಿ ‘ಬಂಡವಾಳ ಪರ್ಯಾಪ್ತತಾ ಅನುಪಾತ’ಕ್ಕೆ ಬ್ಯಾಂಕಿನ ಮುಂಗಡ, ಹೂಡಿಕೆ ಇತ್ಯಾದಿಗಳ ಸುರಕ್ಷತೆಯ ಆಧಾರದ ಮೇಲೆ ಕನಿಷ್ಠ ಶೇ.8ರ ಮಾನದಂಡವನ್ನು ಪಾಲಿಸುತ್ತಿದ್ದರೆ, ಭಾರತದಲ್ಲಿ ಕನಿಷ್ಠ ಶೇ.9ರ ಅನುಪಾತವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದೆ. ಆದರೆ, ನಮ್ಮ ಕರ್ಣಾಟಕ ಬ್ಯಾಂಕ್​ನಲ್ಲಿ ನಾವು

ಆರ್​ಬಿಐ ನಿಗದಿ ಪಡಿಸಿದ ಕನಿಷ್ಠ ಶೇ.9ರ ಅನುಪಾತಕ್ಕೆ ಇನ್ನೂ ಶೇ.1ನ್ನು ಹೆಚ್ಚಾಗಿಯೇ ಸದಾಕಾಲ ಕಾಪಾಡಿಕೊಂಡು ಬಂದಿದ್ದೇವೆ. ಕಳೆದ ವರ್ಷದ ಮಾರ್ಚ್ ಅಂತ್ಯಕ್ಕೆ ಇದು ಅತ್ಯುತ್ತಮ ಅಂದರೆ ಶೇ13.17ರ ಅನುಪಾತದಲ್ಲಿದ್ದು, ಈ ರೀತಿಯ ಉತ್ತಮ ಅನುಪಾತವಿರುವ ಕೆಲವೇ ಕೆಲವು ಬ್ಯಾಂಕ್​ಗಳಲ್ಲಿ ಕರ್ಣಾಟಕ ಬ್ಯಾಂಕ್ ಸಹ ಒಂದು ಎಂದು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಆರ್​ಬಿಐ ಗವರ್ನರ್, ಭಾರತೀಯ ಸ್ಟೇಟ್ ಬ್ಯಾಂಕ್ ಅಧ್ಯಕ್ಷರು ಹಾಗೂ ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರ ಇತ್ತೀಚಿನ ಮಾಧ್ಯಮ ಹೇಳಿಕೆಗಳತ್ತ ಗಮನ ಸೆಳೆದಿರುವ ಅವರು, ಈ ಮಹನೀಯರ ಹೇಳಿಕೆಗಳು ಎಲ್ಲ ಬ್ಯಾಂಕ್ ಗ್ರಾಹಕರಿಗೆ ಸಮಯೋಚಿತ ಮಾರ್ಗಸೂಚಿ ಅಂಶಗಳು ಎಂದು ಅಭಿಪ್ರಾಯಪಟ್ಟಿದ್ದಾರೆ. 96 ವರ್ಷಗಳಿಂದ ಗ್ರಾಹಕರ ಅನುಪಮ ವಿಶ್ವಾಸ ಹಾಗೂ ಸಹಕಾರದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಕರ್ಣಾಟಕ ಬ್ಯಾಂಕ್ ಮುಂದಿನ ವರ್ಷಗಳಲ್ಲಿ ದೇಶದ ಪ್ರಮುಖ ಬ್ಯಾಂಕ್​ಗಳಲ್ಲಿ ಒಂದಾಗಿ ಮುಂಚೂಣಿಗೆ  ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.