ಜಿಲ್ಲೆ

ಕ್ರಾಂತಿಯಿಂದಲೇ ಕಾರ್ಮಿಕರಿಗೆ ಉಳಿಗಾಲ

ರಮೇಶ ಮೇಳಕುಂದಾ

ಕಲಬುರಗಿ: ಮನೆ ಕಟ್ಟುವ ಕಾರ್ಮಿಕರು ಹೊರಗೆ ಕುಳಿತು ಊಟ ಮಾಡಿದರೆ, ಗಂಟೆ ಭಾರಿಸುವವರು ಒಳಗೆ ಪೂಜೆ ಮಾಡುತ್ತಿರುತ್ತಾರೆ. ಎಲ್ಲೆಡೆ ಕಾರ್ಮಿಕರು ಕನಿಷ್ಠ ಎಂಬ ಭಾವವಿದ್ದು, ಸೌಲಭ್ಯಗಳನ್ನು ಪಡೆಯಲು ಸಂಘಟಿತರಾಗಿ ಕ್ರಾಂತಿಕಾರಿ ಹೋರಾಟ ಮಾಡಿದರೆ ಉಳಿಗಾಲವಿದೆ ಎಂದು ಮಾಜಿ ಕಾರ್ಮಿಕ ಸಚಿವ ಎಸ್.ಕೆ.ಕಾಂತಾ ಹೇಳಿದರು.

ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ರಾಜ್ಯ ಫೆಡರೇಷನ್, ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನಿAದ ನಗರದ ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಾರ್ಮಿಕರನ್ನು ಎಲ್ಲೆಡೆ ಕನಿಷ್ಠವಾಗಿ ನೋಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದುಡಿಯುವ ವರ್ಗಕ್ಕೆ ಬೆಲೆ ಬಂದಿಲ್ಲ. ವಿದೇಶದಲ್ಲಿ ದುಡಿಯುವವರಿಗೆ ಹೆಚ್ಚಿನ ಸಂಬಳವಿದೆ. ಆದರೆ ನಮ್ಮಲ್ಲಿ ಗಂಟೆ ಹೊಡೆಯುವವರಿಗೆ, ಕಚೇರಿಯಲ್ಲಿ ಕುಳಿತು ಬರೆಯುವವರಿಗೆ ಹೆಚ್ಚು ವೇತನವಿದೆ ಎಂದರು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸದಸ್ಯ ಎಚ್.ಜಿ.ರಮೇಶ ಮಾತನಾಡಿ, ಕಾರ್ಮಿಕ ಮಂಡಳಿಯೂ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ, ಮದುವೆ, ವೈದ್ಯಯಕೀಯ ವೆಚ್ಚ, ಅಂತ್ಯಕ್ರಿಯೆ ಸೇರಿ ೧೭ ಅಂಶಗಳ ನೆರವು ಯೋಜನೆಗಳಿವೆ. ಹೊಸದಾಗಿ ಕಾರ್ಮಿಕ ಸಚಿವರು ಕಾರ್ಮಿಕರ ಮಕ್ಕಳಿಗೆ ಕೌಶಲ ತರಬೇತಿ ನೀಡಿ, ಕೈಗಾರಿಕೆಗಳಲ್ಲಿ ಕೆಲಸ ನೀಡುವಂತೆ ಕಂಪನಿಗಳವರಿಗೆ ಸೂಚಿಸಿದ್ದಾರೆ ಎಂದರು.

ರಾಜ್ಯದಲ್ಲಿ ಬಹುತೇಕ ಕಾರ್ಮಿಕರಿಗೆ ಮನೆಗಳಿಲ್ಲ. ೨೦೨೩-೨೪ರಲ್ಲಿ ೧೦೦ ಕೋಟಿ ರೂ. ಬಜೆಟ್ ಮೀಸಲಿಟ್ಟಿದ್ದು, ಮೊದಲ ಹಂತದಲ್ಲಿ ಧಾರವಾಡದಲ್ಲಿ ಮನೆಗಳನ್ನು ಕಾರ್ಮಿಕರಿಗೆ ನೀಡುತ್ತಿದ್ದು, ಭವಿಷ್ಯದಲ್ಲಿ ವಿಸ್ತರಿಸಲಾಗುತ್ತದೆ. ಒಂದು ವರ್ಷದಲ್ಲಿ ಕಲಬುರಗಿಯಲ್ಲಿ ೧೨ ಕಾರ್ಮಿಕರಿಗೆ ೩೦ ಲಕ್ಷ ಅಪಘಾತ ಪರಿಹಾರ ನೀಡಿದ್ದು, ನಿಧನರಾದ ೧೬೫ ಕಾರ್ಮಿಕರಿಗೆ ೧.೨೩ ಕೋಟಿ ರೂ. ಅಂತ್ಯಕ್ರಿಯೆ ಸಹಾಯಧನ ನೀಡಿದ್ದು, ೩೧೨ ಕಾರ್ಮಿಕರ ಮಕ್ಕಳಿಗೆ ೧.೮೭ ಕೋಟಿ ರೂ. ಸಹಾಯಧನ ನೀಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಉದ್ಘಾಟಿಸಿದರು. ಅಶೋಕ ಘೂಳಿ ಪ್ರಾಸ್ತಾವಿಕ ಮಾತನಾಡಿದರು. ಐಎನ್‌ಟಿಯುಸಿ ಪ್ರಧಾನ ಕಾರ್ಯದರ್ಶಿ ವಿ.ವೆಂಕಟೇಶ, ಪ್ರಮುಖರಾದ ಎಚ್.ಎಂ.ಯಲ್ಲಪ್ಪ, ಶರಣಪ್ಪ ಹಳಿಮನಿ, ಶಂಕರ ಕಟ್ಟಿಸಂಗಾವಿ, ಪ್ರಭುದೇವ ಯಳಸಂಗಿ, ನಾಗೇಂದ್ರಪ್ಪ ಯಡ್ಡಳ್ಳಿ, ಹಣಮಂತರಾಯ ಪೂಜಾರಿ, ಭೀಮರಾಯ ಕಂದಳ್ಳಿ, ಚಂದು ಜಾಧವ್, ಬಾಲಮ್ಮ ಕೊಟ್ಟರಕಿ, ವಾಮನರಾವ ಕಟ್ಟಿ, ಸಂತೋಷ ಪೂಜಾರಿ, ಸೋಹೆಲ್ ಅಹ್ಮದ್, ಶಿವರಾಜ ಸುಬೇದಾರ, ಸಂಜುಕುಮಾರ ಗುತ್ತೇದಾರ್, ಸಂಜು ಖೈರಾಟ, ಫಕ್ರುದ್ದೀನ್ ಅನ್ಸಾರಿ, ಬಾಬುರಾವ ಜಂಬಗಾ, ಅರುಣ ಸಿಂಗೆ, ಶಿವಶರಣಪ್ಪ ತೆಳಕೇರಿ ಇತರರಿದ್ದರು.

ಮಲ್ಲಿಕಾರ್ಜುನ ಮಾಳಗೆ ನಿರೂಪಣೆ ಮಾಡಿದರು. ಶಿವಲಿಂಗ ಹಾವನೂರ ಸ್ವಾಗತಿಸಿದರು.