ಮಡಿಕೇರಿ: ಕೊಡವ ಎಂ.ಎ ಸ್ನಾತಕೋತ್ತರ ವಿಭಾಗ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮತ್ತು ಕೊಡವ ಮಕ್ಕಡ ಕೂಟದ ಸಹಯೋಗದಲ್ಲಿ ಆ.೫ ರಂದು ಕರ್ಮ-ಪ್ರಾರಬ್ಧ ಕೊಡವ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದ್ದಾರೆ.
ಅಂದು ಬೆಳಗ್ಗೆ ೧೦.೩೦ ಗಂಟೆಗೆ ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಸಾಹಿತಿ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಬರೆದಿರುವ, ಕೊಡವ ಮಕ್ಕಡ ಕೂಟದ ೭೧ನೇ ಪುಸ್ತಕ ಕರ್ಮ-ಪ್ರಾರಬ್ಧ ಅನಾವರಣಗೊಳ್ಳಲಿದೆ. ಫೀ.ಮಾ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ.ಮೇಜರ್ ರಾಘವರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂ.ಎ ಕೊಡವ ವಿಭಾಗದ ಸಂಯೋಜಕ ಮೇಚಿರ ರವಿಶಂಕರ್ ನಾಣಯ್ಯ, ಸಾಹಿತಿಗಳು ಹಾಗೂ ಎಂ.ಎ ಕೊಡವ ವಿಭಾಗದ ಉಪನ್ಯಾಸಕರಾದ ಬಾಚರಣಿಯಂಡ ಅಪ್ಪಣ್ಣ, ಬಾಚರಣಿಯಂಡ ರಾಣು ಅಪ್ಪಣ್ಣ, ಕರ್ಮ-ಪ್ರಾರಬ್ಧ ಪುಸ್ತಕದ ಬರಹಗಾರ ಹಾಗೂ ಸಾಹಿತಿ ಕೊಟ್ಟುಕತ್ತಿರ ಜಾಲಿ ಸೋಮಣ್ಣ, ಕೊಡವ ಎಂ.ಎ ವಿದ್ಯಾರ್ಥಿ ಹಾಗೂ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಬೊಳ್ಳಜಿರ ಬಿ.ಅಯ್ಯಪ್ಪ ಮನವಿ ಮಾಡಿದ್ದಾರೆ.
ದಾಖಲೆಯ ೭೧ ನೇ ಪುಸ್ತಕ: ಬೊಳ್ಳಜಿರ ಬಿ.ಅಯ್ಯಪ್ಪ ನೇತೃತ್ವದ ಕೊಡವ ಮಕ್ಕಡ ಕೂಟದ ವತಿಯಿಂದ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು ೭೦ ಕೃತಿಗಳನ್ನು ಬಿಡುಗಡೆ ಮಾಡಿದೆ. ಇದೀಗ ೭೧ ನೇ ಪುಸ್ತಕವಾಗಿ ಕರ್ಮ-ಪ್ರಾರಬ್ಧ ವನ್ನು ಬಿಡುಗಡೆ ಮಾಡುತ್ತಿರುವುದು ಹೆಮ್ಮೆ ಎನಿಸಿದೆ ಎಂದು ಅಯ್ಯಪ್ಪ ತಿಳಿಸಿದ್ದಾರೆ.