ಹರಿಪ್ರಸಾದ್ ನಂದಳಿಕೆ ಕಾರ್ಕಳ
ಕೆಲವೇ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದರೂ ಕಾರ್ಕಳ ತಾಲೂಕಾದ್ಯಂತ ಮಳೆಗಾಲದ ಪೂರ್ವ ಸಿದ್ಧತೆ ಇನ್ನೂ ನಡೆದಿಲ್ಲ. ಮಳೆಗಾಲಕ್ಕೆ ಮುನ್ನ ಚರಂಡಿ ವ್ಯವಸ್ಥೆ, ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ವ್ಯವಸ್ಥೆಗಳು ಸೇರಿದಂತೆ ತಾಲೂಕು ಆಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಪುರಸಭೆ ಮಳೆಗಾಲದ ಸಿದ್ಧತೆ ನಡೆಸುವುದು ಸಾಮಾನ್ಯ. ಈ ಬಾರಿ ಬಹುತೇಕ ಕಡೆಗಳಲ್ಲಿ ಪೈಪ್‌ಲೈನ್ ಕಾಮಗಾರಿಯಿಂದ ಚರಂಡಿಗಳು ಮಾಯವಾಗಿದ್ದು, ಚರಂಡಿ ನಿರ್ಮಾಣವೇ ಆಡಳಿತಕ್ಕೆ ದೊಡ್ಡ ಸವಾಲಾಗಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯಹೆದ್ದಾರಿ ಸೇರಿದಂತೆ ರಸ್ತೆಗಳ ಪಕ್ಕದಲ್ಲಿ ಚರಂಡಿಗಳು ಕಣ್ಮರೆಯಾಗಿದೆ. ದಿಢೀರನೆ ಮಳೆ ಸುರಿದರೆ ಕೃತಕ ನೆರೆ ಉಂಟಾಗುವ ಭೀತಿಯಿದೆ. ಒಂದು ವಾರದಿಂದ ತಾಲೂಕಿನ ಕೆಲವೊಂದು ಭಾಗದಲ್ಲಿ ಪದೇಪದೆ ಸಾಧಾರಣ ಮಳೆಯಾಗುತ್ತಿದ್ದು, ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆಗಳಿಲ್ಲದೆ ರಸ್ತೆಯಲ್ಲೇ ಕೆಸರು ನೀರುಹರಿಯುತ್ತಿದೆ. ಕಲ್ಲು ಮಣ್ಣು ರಸ್ತೆಯಲ್ಲೇ ಶೇಖರಣೆಯಾಗಿ ವಾಹನ ಸವಾರರಿಗೆ ತೊಂದರೆ ಎದುರಾಗಿದೆ.
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಒಳಚರಂಡಿ ವ್ಯವಸ್ಥೆಯದ್ದೇ ಸಮಸ್ಯೆ ಎದುರಾಗುತ್ತಿದ್ದು, ಈ ಬಾರಿಯೂ ದೊಡ್ಡ ಸವಾಲಾಗಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಒಳಚರಂಡಿಗಳನ್ನು ಅಗೆದು ಹಾಕಿ ಕಾಮಗಾರಿ ನಡೆಯುತ್ತಿವೆ. ನೀರಿನ ವ್ಯವಸ್ಥೆಗಾಗಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಯಿಂದ ಅಲ್ಲಲ್ಲಿ ಮಣ್ಣು ಅಗೆದು ಹಾಕಿದ ಪರಿಣಾಮ ಚರಂಡಿಯ ತುಂಬೆಲ್ಲ ಮಣ್ಣು ಬಿದ್ದು ಚರಂಡಿ ಮಾಯವಾಗಿದೆ.
ಕಾರ್ಕಳ ಪಡುಬಿದ್ರೆ ಸಾಗುವ ರಾಜ್ಯ ಹೆದ್ದಾರಿ, ಕಾರ್ಕಳ ಮೂಡಬಿದಿರೆ ಹೆದ್ದಾರಿ, ಉಡುಪಿ ಸಾಗುವ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಚರಂಡಿಗಳು ಮುಚ್ಚಿಹೋಗಿದ್ದು, ಮಳೆ ನೀರು ಹರಿಯಲು ಜಾಗವಿಲ್ಲದಂತಾಗಿದೆ. ಮಳೆರಾಯನ ಆಗಮನವಾದರೆ ಹೆದ್ದಾರಿ ಹಾಗೂ ನಗರ ರಸ್ತೆಗಳೆಲ್ಲ ಚರಂಡಿಯಾಗಲಿದೆ. ಆಡಳಿತ ವ್ಯವಸ್ಥೆಯು ಚರಂಡಿ ನಿರ್ಮಾಣದ ಬಗ್ಗೆ ಹಾಗೂ ಮಳೆಗಾಲದ ಪೂರ್ವ ಸಿದ್ಧತೆ ಬಗ್ಗೆ ಕ್ರಮ ವಹಿಸಿಲ್ಲ ಎನ್ನುವುದು ಸ್ಥಳೀಯರ ಆರೋಪ.
ಕಳೆದ ಒಂದು ವರ್ಷದಿಂದ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಅಗೆದು ಪೈಪ್ ಹಾಕಿ ಮಣ್ಣು ಮುಚ್ಚಲಾಗಿದೆ. ಸಂಪರ್ಕ ನೀಡಲು ಮತ್ತೆ ರಸ್ತೆ ಅಗೆಯುವ ಸ್ಥಿತಿ ನಿರ್ಮಾಣವಾಗಿದೆ. ಕಾಟಾಚಾರಕ್ಕೆ ಕಾಮಗಾರಿ ನಡೆಸುವಂತೆ ರಸ್ತೆ ಬದಿ ಪದೇಪದೆ ಅಗೆದು ಹಾಕುವುದರಿಂದ ವಾಹನ ಸವಾರರಿಗೂ ನಿತ್ಯ ಕಿರಿಕಿರಿಯಾಗುತ್ತಿದೆ. ಪರಿಸರವಿಡೀ ಧೂಳಿನಿಂದ ಕೂಡಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ರೀತಿಯ ಅವೈಜ್ಞಾನಿಕ ಪೈಪ್‌ಲೈನ್ ಕಾಮಗಾರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬರುತ್ತಿವೆ.
ಮಳೆಗಾಲದಲ್ಲಿ ಒಳಚರಂಡಿ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು, ಈ ಬಾರಿ ಬಹುತೇಕ ಒಳಚರಂಡಿ ಕಾಮಗಾರಿ ಶೀಘ್ರ ಮುಗಿಸುವಂತೆ ತಿಳಿಸಲಾಗಿದೆ. ಈಗಾಗಲೇ ಕಾಮಗಾರಿ ಆರಂಭಗೊಂಡಿದೆ. ಲೀನಾ ಬ್ರಿಟ್ಟೋ, ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ತಾಲೂಕಾದ್ಯಂತ ಚರಂಡಿ ವ್ಯವಸ್ಥೆಗಳಿಲ್ಲ. ನಗರದ ಬಹುತೇಕ ರಸ್ತೆಗಳ ಬದಿಯಲ್ಲಿ ಪೈಪ್‌ಲೈನ್ ಕಾಮಗಾರಿಯಿಂದ ಚರಂಡಿ ಮಾಯವಾಗಿದೆ. ಮಳೆಗಾಲ ಆರಂಭವಾದರೆ ಅಂಗಡಿಗಳ ಒಳಗೆ ನೀರು ನುಗ್ಗಿ ಸಮಸ್ಯೆ ಉಂಟಾಗಲಿದೆ. ಪ್ರಸಾದ್ ಕುಮಾರ್ ಗ್ರಾಮಸ್ಥ https://www.vijayavani.net/installation-of-god-in-the-balalaya https://www.vijayavani.net/bantakal-college-wins-prize-in-yakshagana