ವಿಜಯವಾಣಿ ಸುದ್ದಿಜಾಲ ಕಾರ್ಕಳ
ಕಾರ್ಕಳ ಪುರಸಭೆಯ ಸಾಮಾನ್ಯ ಸಭೆ ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಬೀದಿನಾಯಿಗಳ ಸಮಸ್ಯೆ ಹೆಚ್ಚಳದ ವಿರುದ್ಧ ಕೈಗೊಳ್ಳಲಾದ ಕ್ರಮಗಳ ಕುರಿತು ವಿಪಕ್ಷ ನಾಯಕ ಆಶ್ಪಕ್ ಸಭೆಯಲ್ಲಿ ಪ್ರಶ್ನಿಸಿದ್ದು, ಪ್ರತಿಕ್ರಿಯಿಸಿದ ಅಧಿಕಾರಿಗಳು, ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 700 ನಾಯಿಗಳ ಸಂತಾನಶಕ್ತಿಹರಣ ಚಿಕಿತ್ಸೆ ಅಗತ್ಯವಿದ್ದು, ಆರಂಭದಲ್ಲಿ ಟೆಂಡರ್ ಸಮಸ್ಯೆ ಎದುರಾಗಿತ್ತು. ಕೊನೆಗೂ ಪಶುವೈದ್ಯಕೀಯ ಇಲಾಖೆಗೆ ಒತ್ತಡ ಹೇರಿ 300 ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ವಾಣಿಜ್ಯ ಹಾಗೂ ಮನೆ ತೆರಿಗೆ ಅಧಿಕವಿದ್ದು, ಇಳಿಕೆ ಮಾಡಬೇಕು. ಕಾಪು ನಗರಾಡಳಿತದಲ್ಲಿ ತೆರಿಗೆ ದರ ಇಳಿಸಲಾಗಿದೆ ಎಂದು ಅಶ್ಪಕ್ ಅಹಮ್ಮದ್ ಪುರಸಭೆಗೆ ಒತ್ತಾಯಿಸಿದರು. ಅಧ್ಯಕ್ಷ ಯೊಗೀಶ್ ದೇವಾಡಿಗ ಉತ್ತರಿಸಿ, ಸರ್ಕಾರದ ಸೂಚನೆ ಪ್ರಕಾರವೇ ದರ ನಿಗದಿಯಾಗಿದೆ. ತೆರಿಗೆ ಇಳಿಕೆಗೆ ಚರ್ಚೆ ನಡೆಸುವ ಎಂದರು.
ಸದಸ್ಯೆ ಶಶಿಕಲಾ ಶೆಟ್ಟಿ ಮಾತನಾಡಿ, ಒಳಚರಂಡಿ ತೆರಿಗೆ ದರ 10 ರೂ. ಇದ್ದು, ಪ್ರಸ್ತುತ ಪ್ರತಿ ಮನೆಗೆ 200 ರೂ. ನಿಗದಿಪಡಿಸಲಾಗಿದೆ. ಜನಸಾಮಾನ್ಯರಿಗೆ ಇದು ಹೊರೆಯಾಗಿದ್ದು, ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು. ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ಪ್ಲಾಂಟ್‌ನ ವಿದ್ಯುತ್ ಬಿಲ್ ತಿಂಗಳಿಗೆ 3 ಲಕ್ಷ ರೂ. ಬರುತ್ತಿದೆ. ಬಿಲ್ ದರ ಕಡಿಮೆಗೊಳಿಸಿದರೆ ವಿದ್ಯುತ್ ಬಿಲ್ ಪಾವತಿ ಹೊರೆಯಾಗುತ್ತದೆ ಎಂದರು.
ಪುರಸಭೆ ವ್ಯಾಪ್ತಿಯ ಕಾಮಗಾರಿಗಳು ನಡೆದಿರುವ ಕುರಿತು ನಾಮಫಲಕಗಳು ಅಳವಡಿಕೆಯಾಗದೇ ಇರುವುದನ್ನು ಸುಮಾಕೇಶವ್ ಪ್ರಸ್ತಾಪಿಸಿದ್ದು, ಅಶ್ಪಕ್ ಅಹಮ್ಮದ್ ದನಿಗೂಡಿಸಿದರು. ವಾರ್ಡ್‌ನಲ್ಲಿ ಕಾಮಗಾರಿ ನಡೆದು ಬಿಲ್ ಪಾವತಿಯಾಗುವಾಗ ವಾರ್ಡ್ ಸದಸ್ಯರ ಗಮನಕ್ಕೆ ತರುವಂತೆ ಪ್ರತಿಮಾ ರಾಣೆ ಆಗ್ರಹಿಸಿದರು. ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಉಪಸ್ಥಿತರಿದ್ದರು.
ಆನೆಕೆರೆಯಲ್ಲಿ ಬಫರ್ ಝೋನ್ ಜಾಗದಲ್ಲಿ ಕಟ್ಟಡಕ್ಕೆ ಪರವಾನಗಿ ನೀಡುವುದರ ಜತೆಗೆ ನಿಯಮ ಬಾಹಿರವಾಗಿ ಮನೆ ನಂಬರ್ ನೀಡಿರುವ ಕುರಿತು ಶುಭದ ರಾವ್ ಮುಖ್ಯಾಧಿಕಾರಿಯನ್ನು ತರಾಟೆಗೆತ್ತಿಕೊಂಡರು. ಈ ಸಂದರ್ಭ ಮುಖ್ಯಾಧಿಕಾರಿ ಹಾಗೂ ಶುಭದ ನಡುವೆ ಚರ್ಚೆ ನಡೆಯಿತು. ಮಧ್ಯಪ್ರವೇಶಿಸಿದ ಅಧ್ಯಕ್ಷ ಯೊಗೀಶ್ ದೇವಾಡಿಗ, 32 ಮೀ ಅಂತವಿರುವ ಬಗ್ಗೆ ತಿಳಿದುಕೊಂಡ ಬಳಿಕ ಮನೆ ನಂಬರ್ ನೀಡಲಾಗಿದೆ ಎಂದು ಉತ್ತರಿಸಿದರು.
ದಲಿತ ಎಂಬ ಕಾರಣಕ್ಕೆ ಪುರಸಭೆಯ ಜವಾನನ್ನು ಶೌಚಗೃಹ ಸ್ವಚ್ಛತೆ, ನೈರ್ಮಲ್ಯ ವಿಲೇವಾರಿ ಸಹಿತ ವೈಯಕ್ತಿಕ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಸದಸ್ಯ ಶುಭದ ರಾವ್ ಆರೋಪಿಸಿದ್ದು, ಈ ಕುರಿತು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಮುಖ್ಯಾಧಿಕಾರಿ ರೂಪಾ ಟಿ.ಶೆಟ್ಟಿ ಸ್ಪಷ್ಟೀಕರಣ ನೀಡಿ, ದುರುದ್ದೇಶ ಪೂರ್ವಕವಾಗಿ ಜವಾನನಿಂದ ಕಾರ್ಯ ಮಾಡಿಸಿಕೊಳ್ಳುತ್ತಿಲ್ಲ. ಅನಗತ್ಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಶೌಚಗೃಹದ ಸ್ವಚ್ಛತೆ ದೃಷ್ಟಿಯಿಂದ ಸಿಬ್ಬಂದಿ ಕೆಲಸ ಮಾಡುತ್ತಾರೆ ಎಂದರು. ಈ ಸಂದರ್ಭ ಮುಖ್ಯಾಧಿಕಾರಿ ಹಾಗೂ ನೆರೆದಿದ್ದವರ ನಡುವೆ ಜಟಾಪಟಿ ನಡೆಯಿತು.
ಹರೀಶ್ ಎಂಬುವರು ಪ್ರಾಕೃತಿಕ ವಿಕೋಪದ ಅನುದಾನವನ್ನು ಎಲ್ಲ ವಾರ್ಡ್‌ಗಳಿಗೆ ಸಮಾನವಾಗಿ ಹಂಚುವಂತೆ ಪುರಸಭೆಯನ್ನು ಆಗ್ರಹಿಸಿದ್ದು, ಅಧ್ಯಕ್ಷ ಯೋಗೀಶ್ ಪ್ರತಿಕ್ರಿಯಿಸಿ, ಪ್ರಾಕೃತಿಕ ವಿಕೋಪ ಹಣ ಹಂಚಿಕೆಯಲ್ಲಿ ತಾರತಮ್ಯವಿಲ್ಲ. ಇತರ ಅನುದಾನಕ್ಕೂ ಡಿಸಿಗೆ ಬೇಡಿಕೆ ಇಟ್ಟಿದ್ದೇವೆ. ಲಭ್ಯ ಅನುದಾನದ ಆಧಾರದಲ್ಲಿ ಆದ್ಯತೆ ಮೇರೆಗೆ ಕಾರ್ಯ ನಡೆಸಲಾಗುವುದು ಎಂದರು.