ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 2 ಕರೊನಾ ಪಾಸಿಟಿವ್ ಪ್ರಕರಣಗಳು ಮಂಗಳವಾರ ವರದಿಯಾಗಿದ್ದು, ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 27ಕ್ಕೇರಿದೆ.
ಇಬ್ಬರೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರು. ಮಂಗಳೂರಿನ ಸದ್ಯದ ಕೋವಿಡ್ ಕೇಂದ್ರವಾಗಿರುವ ಫಸ್ಟ್ ನ್ಯೂರೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು. ಕಾರ್ಕಳದ ಸಾಣೂರಿನ 50 ವರ್ಷದ ಮಹಿಳೆ(ಪಿ-878) ಹಾಗೂ ಅವರ 26 ವರ್ಷದ ಮಗ (ಪಿ-877) ಅವರ ಸ್ಯಾಂಪಲ್ ಪರೀಕ್ಷೆಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
ಪಿ-878 ಅವರು ಮಾತು ನಿಂತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಏ.14ರಂದು ಮಿಜಾರಿನ ತಮ್ಮ ತಾಯಿ ಮನೆಗೆ ತೆರಳಿದ್ದರು, ಅಲ್ಲಿಂದ ಏ.20ರಂದು ಫಸ್ಟ್ ನ್ಯೂರೋ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಅಲ್ಲಿ ಅವರು ಶಕ್ತಿನಗರದ ವೃದ್ಧೆ(ಪಿ-507) ಕೊಠಡಿಯಲ್ಲೇ ಇದ್ದವರು.
ಪಿ-507 ವೃದ್ಧೆಗೆ ಕರೊನಾ ಪಾಸಿಟಿವ್ ಬಂದ ಬಳಿಕ, ಸೋಂಕು ತಗಲಿರುವ ಶಂಕೆಯಲ್ಲಿ ಸಾಣೂರಿನ ಮಹಿಳೆ ಹಾಗೂ ಅವರನ್ನು ನೋಡಿಕೊಳ್ಳಲು ಜೊತೆಗಿದ್ದ ಮಗ ಇಬ್ಬರನ್ನೂ ಫಸ್ಟ್ ನ್ಯೂರೊ ಆಸ್ಪತ್ರೆಯಲ್ಲೇ ನಿಗಾವಣೆಯಲ್ಲಿ ಇರಿಸಲಾಗಿತ್ತು. ಇವರಿಬ್ಬರ 12ನೇ ದಿನದ ಸ್ಯಾಂಪಲ್ ಪರೀಕ್ಷೆಯಲ್ಲಿ ಕರೊನಾ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಫಸ್ಟ್ ನ್ಯೂರೊ ಆಸ್ಪತ್ರೆಯ ಸಂಪರ್ಕದಿಂದ ಒಟ್ಟು 19 ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದಿಯಾಗಿವೆ.
ಕರೊನಾ ಶಂಕಿತ 88 ಮಂದಿಯ ಮಾದರಿ ವರದಿ ಮಂಗಳವಾರ ನೆಗೆಟಿವ್ ಬಂದಿದ್ದು, 87 ವರದಿ ಬರಲು ಬಾಕಿ ಇದೆ. ಇನ್ನೊಂದೆಡೆ, ಕಾಸರಗೋಡಿನಲ್ಲಿ ಕೋವಿಡ್ ಪ್ರಕರಣ ಕಂಡುಬಂದಿಲ್ಲ.