ಜಿಲ್ಲೆ

ದೇವರ ದಯೆಯಿಂದ ಬದುಕಿದೆವು!

Dakshina Kannada

ಮುಳ್ಳೇರಿಯ: ವಿಮಾನ ಭೂ ಸ್ಪರ್ಶದ ಕೊನೆಯ ಘಳಿಗೆಯಲ್ಲಿದ್ದಾಗ ಏನೋ ಆಗಬಾರದ್ದು ಆಗುತ್ತಿದೆ ಎಂದು ಅನಿಸಿತು. ವಿಮಾನ ಇದ್ದಕ್ಕಿದ್ದಂತೆ ಮೇಲಕ್ಕೆ, ಕೆಳಕ್ಕೆ ಹೋಗುತ್ತ ಕೆಳಗೆ ಬಿದ್ದದ್ದಷ್ಟೇ ನೆನಪಿದೆ.

- ಹೀಗೆಂದವರು ಕೋಯಿಕ್ಕೋಡ್ ಕರಿಪ್ಪೂರ್ ವಿಮಾನ ದುರಂತದಲ್ಲಿ ಬದುಕುಳಿದ ಕಾಸರಗೋಡು ಜಿಲ್ಲೆಯ ಕುಣಿಯ ನಿವಾಸಿ ಅಬ್ದುಲ್ ರಫಿ ಎ.ಹಮೀದ್.

ಶನಿವಾರ ಬೆಳಗ್ಗೆ ಕುಟುಂಬ ಸಮೇತ ಮನೆಗೆ ಆಗಮಿಸಿದ ಅವರು ‘ವಿಜಯವಾಣಿ’ ಜತೆ ಅನುಭವ ಹಂಚಿಕೊಂಡರು.

ಅಬ್ದುಲ್ ರಫಿ ಎ.ಹಮೀದ್(39) ಶಾರ್ಜಾದ ಖಾಸಗಿ ವಿಮಾ ಕಂಪನಿ ಉದ್ಯೋಗಿ. ಪತ್ನಿ ಆಶತ್ ಸಲೀನಾ, ಮಕ್ಕಳಾದ ಅಬ್ದುಲ್ಲಾ ರಿಹಾನ್(10) ಮತ್ತು ಅಬ್ದುಲ್ಲಾ ಶೆಹ್ರಾನ್(4) ವಿಮಾನದಲ್ಲಿದ್ದು, ಇದೀಗ ಬದುಕುಳಿದಿದ್ದಾರೆ.

ಎಲ್ಲರೂ ವಿಮಾನದ ಮಧ್ಯ ಭಾಗದ ಸೀಟುಗಳಲ್ಲಿ ಕುಳಿತಿದ್ದರು. ಅಪಘಾತದಲ್ಲಿ ರಫಿ ತಮ್ಮ ಮೊಬೈಲ್ ಮತ್ತು ಇತರ ಲಗೇಜುಗಳನ್ನು ಕಳೆದುಕೊಂಡರು. ಅಪಘಾತದ ಬಳಿಕ ಆರೋಗ್ಯ ಕಾರ್ಯಕರ್ತರು ಕೊಂಡೋಟ್ಟಿ ಎಂಬಲ್ಲಿನ ಖಾಸಗಿ ಚಿಕಿತ್ಸಾ ಕೇಂದ್ರಕ್ಕೆ ನಮ್ಮನ್ನು ಕರೆದೊಯ್ದರು. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಷ್ಟೇ ಆಗಿತ್ತು. ದೇವರ ಕೃಪೆಯಿಂದ ಹೆಚ್ಚೇನೂ ಸಂಭವಿಸಲಿಲ್ಲ ಎಂದರು.

ಇತ್ತ ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ, ರಫಿಯವರ ತಂದೆ ಕಲ್ಲಿಂಗಲ್ ಅಬ್ದುಲ್ ಹಮೀದ್ ಶುಕ್ರವಾರ ರಾತ್ರಿಯೇ ವಾಹನದಲ್ಲಿ ಕರಿಪ್ಪೂರ್‌ಗೆ ಧಾವಿಸಿದ್ದರು. ಪುತ್ರ ಹಾಗೂ ಸೊಸೆ, ಮೊಮ್ಮಕ್ಕಳು ಬದುಕುಳಿಯುವ ಭರವಸೆಯನ್ನೇ ಕಳೆದುಕೊಂಡಿದ್ದರು. ಆದರೂ ಪ್ರಾರ್ಥನೆ ಕೈಬಿಡಲಿಲ್ಲ. ದೇವರು ದೊಡ್ಡವನು. ನಮ್ಮ ಮೊರೆ ಆತನಿಗೆ ಕೇಳಿಸಿತ್ತು ಎನ್ನುತ್ತ ವೃದ್ಧ ತಂದೆ, ತಾಯಿ ಭಾವುಕರಾದರು.

ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೈಲಟ್

ಕೇರಳದ ಕೋಯಿಕ್ಕೋಡ್ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಭೂಸ್ಪರ್ಶ ಸಂದರ್ಭ ಅಪಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮುಖ್ಯ ಪೈಲಟ್ ಕ್ಯಾ.ದೀಪಕ್ ವಸಂತ ಸಾಠೆ 2015-16 ಅವಧಿಯಲ್ಲಿ 15 ತಿಂಗಳು ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ಸಂದರ್ಭ ಅವರು ನಗರದ ಕದ್ರಿಯ ಫ್ಲ್ಯಾಟ್‌ನಲ್ಲಿ ಪತ್ನಿ ಜೊತೆ ವಾಸವಾಗಿದ್ದರು.

ಎರಡು ವರ್ಷಗಳಿಂದ ಕುಟುಂಬದೊಂದಿಗೆ ಶಾರ್ಜಾದಲ್ಲಿದ್ದೆ. ಕೋವಿಡ್-19 ಹಿನ್ನೆಲೆಯಲ್ಲಿ ನೌಕರಿ ಕಳೆದುಕೊಂಡು ಭಾರತಕ್ಕೆ ಹಿಂದಿರುಗಿದೆ. ಹಲವು ಬಾರಿ ಪ್ರಯತ್ನಿಸಿ, ಶುಕ್ರವಾರ ಟಿಕೆಟ್ ಲಭಿಸಿತ್ತು. ಅಪಘಾತದಲ್ಲಿ ಪಾಸ್‌ಪೋರ್ಟ್ ಮೊದಲಾದ ದಾಖಲೆಗಳನ್ನೂ ಕಳೆದುಕೊಂಡಿದ್ದೇನೆ. ಬದುಕಿದ್ದೇನೆ, ಅದೇ ಪುಣ್ಯ.

- ಅಬ್ದುಲ್ ರಫಿ ಎ.ಹಮೀದ್, ಕುಣಿಯ ನಿವಾಸಿ, ವಿಮಾನದಲ್ಲಿದ್ದವರು.