ಮಡಿಕೇರಿ:
ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಮೊದಲೇ ಸಂಕಷ್ಟದಲ್ಲಿ ಇರುವ ಗಡಿ ಗ್ರಾಮ ಕರಿಕೆಯಲ್ಲಿ ಈಗ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಸ್ಥಳೀಯರ ನೆಮ್ಮದಿ ಕಸಿದುಕೊಂಡಿದೆ. ಅದರಲ್ಲೂ ಕಾಡಾನೆಗಳ ದಾಳಿಯಿಂದಾಗಿ ಹಗಲಿನಲ್ಲೂ ಸಂಚರಿಸಲು ಭಯಪಡುವ ವಾತಾವರಣ ನಿರ್ಮಾಣ ಆಗಿದೆ. ಸಾಕಷ್ಟು ಬಾರಿ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುವುದು ಇಲ್ಲಿನವರ ನೋವು.
ಕೊಡಗು ಮತ್ತು ಕೇರಳದ ಗಡಿಯಲ್ಲಿರುವ ಕರಿಕೆ ಈಗಲೂ ಕುಗ್ರಾಮವಾಗಿಯೇ ಗುರುತಿಸಿಕೊಂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಸುಮಾರು 60 ಕಿಮೀ ದೂರದ ಈ ಪ್ರದೇಶಕ್ಕೆ ತಲುಪಲು ಹರಸಾಹಸವನ್ನೇ ಮಾಡಬೇಕು.
ಭಾಗಮಂಡಲ ಮತ್ತು ಕರಿಕೆ ಸಂಪರ್ಕಿಸುವ ರಸ್ತೆ ಬಹುತೇಕ ದುಸ್ಥಿತಿಯಲ್ಲಿದ್ದು ಈ ಮಾರ್ಗದಲ್ಲಿ ಸಂಚರಿಸುವವರು ಸಂಬAಧಿಸಿದವರಿಗೆ ಹಿಡಿಶಾಪ ಹಾಕಿಕೊಂಡೇ ಓಡಾಡುವ ಸ್ಥಿತಿ ಇದೆ. ಇಂದಿನ ದಿನಗಳಲ್ಲಿ ಅತ್ಯಗತ್ಯ ಸೌಲಭ್ಯಗಳಲ್ಲಿ ಎಂದು ಪರಿಗಣಿಸಿರುವ ಮೊಬೈಲ್ ಸಂಪರ್ಕಕ್ಕೆ ಇನ್ನೂ ಇಲ್ಲಿನವರು ಪರದಾಡಬೇಕು. ಮಳೆಗಾಲದ ದಿನಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಸಾಮಾನ್ಯ. ಹೀಗೆ ಹಲವು ರೀತಿಯಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಕರಿಕೆ ಗ್ರಾಮಸ್ಥರು ಈಗ ದೊಡ್ಡ ಮಟ್ಟದಲ್ಲಿ ವನ್ಯಜೀವಿ-ಮಾನವ ಸಂಘರ್ಷ ಎದುರಿಸುವಂತಾಗಿದೆ.
ಅದರಲ್ಲೂ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿ ಕಂಡು ಬರುತ್ತಿದೆ. ಮಡೆಕಾನ, ಬೀಟಿಯೋಡಿ ಮತ್ತಿತರ ಭಾಗಗಳಲ್ಲಿ ಹಿಂಡು ಹಿಂಡಾಗಿ ಬರುವ ಆನೆಗಳು ಕೃಷಿಕರ ತೋಟಕ್ಕೆ ನುಗ್ಗಿ ಸಾಕಷ್ಟು ಹಾನಿಗೆ ಕಾರಣವಾಗಿದೆ. ಈ ಭಾಗದಲ್ಲಿ ಬೆಳೆಯುವ ರಬ್ಬರ್, ಅಡಿಕೆ, ಬಾಳೆ, ತೆಂಗು, ಕೋಕೋ ಸೇರಿದಂತೆ ದೀರ್ಘಾವಧಿ ವಾಣಿಜ್ಯ ಬೆಳೆಗಳು ಮಾತ್ರವಲ್ಲದೆ ಮರಗೆಣಸು, ಕೆಸುವಿನ ಗಡ್ಡೆ ಮತ್ತಿತರ ಅಲ್ಪಾವಧಿ ಬೆಳೆಗಳನ್ನೂ ಕಾಡಾನೆಗಳ ಹಿಂಡು ನಾಶ ಮಾಡಿ ಕೃಷಿಕರ ಹಲವು ವರ್ಷಗಳ ಶ್ರಮವನ್ನು ಮಣ್ಣುಪಾಲು ಮಾಡಿವೆ.
ಈ ಭಾಗದಲ್ಲಿ ಸಾರ್ವಜನಿಕರು, ಶಾಲಾ-ಕಾಲೇಜು ಮಕ್ಕಳು, ಕಾರ್ಮಿಕರು ನಿರ್ಭೀತಿಯಿಂದ ತಿರುಗಾಡದಂಥ ವಾತಾವರಣವನ್ನು ಕಾಡಾನೆಗಳು ನಿರ್ಮಿಸಿವೆ. ಮಕ್ಕಳು ಶಾಲೆಗೆ ತೆರಳಿ ಮನೆಗೆ ಬರುವ ತನಕ ಪೋಷಕರು ಆತಂಕದಿAದಲೇ ದಿನದೂಡುವಂತೆ ಆಗಿದೆ. ಯಾರಿಗಾದರೂ ಅನಾರೋಗ್ಯ ಉಂಟಾದರೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕೂಡ ಸಾಧ್ಯವಾಗದ ಸ್ಥಿತಿ ಇಲ್ಲಿದೆ. ಆನೆಗಳಿಂದ ಏನಾದರೂ ಸಮಸ್ಯೆ ಆದರೆ ತುರ್ತಾಗಿ ಸಂಬAಧಿಸಿದವರನ್ನು ಸಂಪರ್ಕಿಸಲು ಈ ವ್ಯಾಪ್ತಿಯಲ್ಲಿ ಸರಿಯಾದ ಮೊಬೈಲ್ ಸಂಪರ್ಕವೂ ಇಲ್ಲ ಎನ್ನುತ್ತಾರೆ ಸ್ಥಳೀಯರು.
ಕರಿಕೆ ಗುಡ್ಡಗಾಡು ಪ್ರದೇಶವಾಗಿದ್ದು ಇಲ್ಲಿ ಮನೆ ಮನೆಗಳಿಗೆ ಕುಡಿಯುವ ನೀರು ಪೂರೈಕೆಗೆ ನೈಸರ್ಗಿಕ ಜಲಮೂಲಗಳನ್ನು ಅವಲಂಭಿಸಲಾಗಿದೆ. ಎತ್ತರದ ಬೆಟ್ಟ ಪ್ರದೇಶದಲ್ಲಿ ಇರುವ ನೀರಿನ ಒರತೆಗಳಿಗೆ ಪೈಪ್‌ಗಳನ್ನು ಅಳವಡಿಸಿ ವಿತರಣಾ ಜಾಲಗಳ ಮೂಲಕ ಮನೆ ಮನೆಗಳಿಗೆ ಕುಡಿಯುವ ನೀರನ್ನು ಪೂರೈಸುವ ವ್ಯವಸ್ಥೆಯನ್ನು ಸ್ಥಳೀಯ ಆಡಳಿತ ಮತ್ತು ಸಾರ್ವಜನಿಕರು ಮಾಡಿಕೊಂಡಿದ್ದಾರೆ. ಇದೀಗ ಆನೆಗಳ ತಿರುಗಾಟ ಈ ಪ್ರದೇಶದಲ್ಲಿ ಹೆಚ್ಚಾಗುತ್ತಿದ್ದಂತೆಯೇ ಸ್ಥಳೀಯರು ಕುಡಿಯುವ ನೀರಿಗೂ ಪರದಾಡುವಂತಾಗಿದೆ.
ಮನ ಬಂದAತೆ ಆನೆಗಳು ಓಡಾಡುವುದರಿಂದ ಆನೆಗಳ ಕಾಲಿಗೆ ಸಿಲುಕಿ ನೀರು ಪೂರೈಕೆಗೆ ಅಳವಡಿಸಿದ ಪೈಪ್‌ಗಳ ಜಾಲ ಹಾಳಾಗುತ್ತಿರುತ್ತದೆ. ಇದರಿಂದಾಗಿ ಕರಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಗಾಗ್ಗೆ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯೂ ಕೈ ಕೊಡುತ್ತಿರುತ್ತದೆ. ಇದು ಇಲ್ಲಿ ಸುಗಮ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಗೆ ದೊಡ್ಡ ಸಮಸ್ಯೆ ಆಗಿದೆ. ಇದರಿಂದಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ಕೆಲವೊಮ್ಮೆ ವಾರಗಟ್ಟಲೆ ಪರದಾಡಬೇಕಾಗುತ್ತದೆ.
ದಟ್ಟ ಕಾಡು ಸುತ್ತುವರಿದಂತೆ ಕರಿಕೆ ಗ್ರಾಮ ಇದ್ದರೂ ಇತ್ತೀಚಿನ ಕೆಲ ವರ್ಷಗಳ ತನಕ ಈ ಭಾಗದಲ್ಲಿ ಆತಂಕ ಹುಟ್ಟಿಸುವ ರೀತಿಯಲ್ಲಿ ಕಾಡಾನೆಗಳ ಸಮಸ್ಯೆ ಇರಲಿಲ್ಲ. ಆದರೆ ಈಗ ಆನೆಗಳು ಕಾಡು ದಾಟಿ ಜನವಸತಿ ಪ್ರದೇಶಗಳಿಗೆ ನೇರವಾಗಿ ದಾಳಿ ಇಡುತ್ತಿದೆ. ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪವೇ ಇದಕ್ಕೆ ನೇರ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಭಾಗದಲ್ಲಿ ಖಾಸಗಿ ಜಲವಿದ್ಯುತ್ ಉತ್ಪಾದನಾ ಕೇಂದ್ರವೊAದಿದ್ದು, ಇಲ್ಲಿ ನಿರ್ಮಿಸಿರುವ ಕಿರು ಅಣೆಕಟ್ಟೆ ಮತ್ತು ಅರಣ್ಯದೊಳಗೆ ನಡೆದಿರುವ ಕಾಮಗಾರಿಗಳ ನಂತರ ಆನೆಗಳ ಹಾವಳಿ ಹೆಚ್ಚಾಗಿದೆ ಎನ್ನುವ ಆರೋಪ ಗ್ರಾಮಸ್ಥರದ್ದು.
ಕಾಡಾನೆಗಳು ಸೇರಿದಂತೆ ವನ್ಯ ಜೀವಿಗಳಿಂದ ಗಡಿಗ್ರಾಮ ಕರಿಕೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯರು ಈಗಾಗಲೇ ಜನಪ್ರತಿನಿಧಿಗಳು ಮತ್ತು ಅರಣ್ಯ ಇಲಾಖೆ ಗಮನ ಸೆಳೆದಿದ್ದಾರೆ. ಸದ್ಯದ ಪರಿಹಾರವಾಗಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟುವಂತೆ ಮನವಿ ಮಾಡಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಆನೆ ಕಂದಕಗಳನ್ನು ವೈಜ್ಞಾನಿಕವಾಗಿ ನಿರ್ಮಿಸುವಂತೆಯೂ ಮನವಿ ಮಾಡಿಕೊಳ್ಳಲಾಗಿದೆ. ಸೋಲಾರ್ ವಿದ್ಯುತ್ ಬೇಲಿ ನಿರ್ಮಾಣದ ಬೇಡಿಕೆಯನ್ನೂ ಇಡಲಾಗಿದೆ.
ಕೆೆÃರಳ-ದಕ್ಷಿಣಕನ್ನಡ-ಕೊಡಗು ಗಡಿಭಾಗದ ಕರಿಕೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿ ಮತ್ತು ಚಿರತೆ ಹಾವಳಿ ಈಗ ಸಾಮಾನ್ಯ ಎಂಬAತಾಗಿದೆ. ಹುಲಿಗಳ ದಾಳಿಯಿಂದ ಪಶುಪಾಲಕರು ಸಂಕಷ್ಟದಲ್ಲಿ ಇದ್ದಾರೆ. ಕೊಟ್ಟಿಗೆಗಳಲ್ಲಿ ಕಟ್ಟಿದ ಬೆಲೆಬಾಳುವ ಹಸುಗಳು ಹೆಬ್ಬುಲಿ ಪಾಲಾಗುತ್ತಿದೆ. ಸಾಕುನಾಯಿ, ಕೋಳಿಗಳನ್ನು ಚಿರತೆಗಳು ಹೊತ್ತೊಯ್ಯುತ್ತಿವೆ. ಹುಲಿ, ಚಿರತೆಗಳ ದಾಳಿ ಭಯದಿಂದ ಸ್ಥಳೀಯರು ರಾತ್ರಿ ವೇಳೆ ಮನೆಯಿಂದ ಹೊರಬಾರದಂಥ ಪರಿಸ್ಥಿತಿ ನಿರ್ಮಾಣ ಆಗಿದೆ. ಮತ್ತೊಂದು ಕಡೆ ಕಾಡು ಕೋಣಗಳು, ಕಾಡುಹಂದಿಗಳ ದಾಳಿಯಿಂದ ಕೃಷಿಕರು ಕಂಗಾಲಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಆನೆಗಳು ತೋಟಗಳಿಗೆ ನುಗ್ಗಿ ಅಪಾರ ಬೆಳೆ ನಷ್ಟ ಮಾಡುತ್ತಿದೆ. ಇದು ಹೀಗೆ ಮುಂದುವರಿದರೆ ನಮಗೆ ಇಲ್ಲಿ ಬದುಕಲು ಅಸಾಧ್ಯ ಆಗುವ ಸ್ಥಿತಿ ನಿರ್ಮಾಣ ಆಗಲಿದೆ. ಮಾನವ ಜೀವ ಹಾನಿ ಆಗದಂತೆ ತಡೆಯಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಹುಲಿ, ಚಿರತೆ ದಾಳಿಯೂ ಹೆಚ್ಚಾಗುತ್ತಿದೆ
ದಿವಾಕರ ಕಟ್ಟಕೋಡಿ, ಕೃಷಿಕ, ಕರಿಕೆ
ಆನೆಗಳು ನೇರವಾಗಿ ಕಾಡಿನಿಂದ ನಾಡಿಗೆ ಬರುತ್ತಿವೆ. ತೋಟ ಮತ್ತು ಮನೆಗಳಿಗೆ ಹಾನಿ ಮಾಡುತ್ತಿವೆ. ಆದ್ದರಿಂದ ಆನೆ ಕಂದಕ ಮತ್ತು ಸೋಲಾರ್ ಬೇಲಿ ಶೀಘ್ರವಾಗಿ ಅಳವಡಿಸಬೇಕು. ಅರಣ್ಯ ಇಲಾಖೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಆನೆಗಳನ್ನು ಓಡಿಸುವ ಕಾರ್ಯಾಚರಣೆ ಮಾಡಬೇಕು. ಒಟ್ಟಿನಲ್ಲಿ ಗ್ರಾಮಸ್ಥರು ನಿದ್ದೆಯಿಲ್ಲದೆ ರಾತ್ರಿ ಕಳೆಯುವ ಪರಿಸ್ಥಿತಿ ಉಂಟಾಗಿದೆ. ಸÀರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು."
ಬೆನ್ನಿ ಪೌಲೋಸ್, ಮಡೆಕಾನ, ಕರಿಕೆ
ಕರಿಕೆ ಗ್ರಾಮದಲ್ಲಿ ನಿರಂತರ ಆನೆ ದಾಳಿಯಿಂದ ನಮ್ಮ ರೈತರ ಬೆಳೆಗಳಿಗೆ ಭಾರಿ ನಷ್ಟ ಉಂಟಾಗುತ್ತಿದೆ. ಮುಖ್ಯವಾಗಿ ತೆಂಗು, ಬಾಳೆ, ಅಡಕೆ ಹಾಗೂ ರಬ್ಬರ್ ಮರಗಳಿಗೆ ಹೆಚ್ಚು ಹಾನಿಯಾಗಿದೆ. ಕುಡಿಯುವ ನೀರಿಗೂ ತೊಂದರೆ ಉಂಟು ಮಾಡುತ್ತಿವೆ. ಶಾಲಾ ಮಕ್ಕಳಿಗೂ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ. ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಆನೆ ದಾಳಿ ಮುಂದುವರೆದರೆ, ಗ್ರಾಮಸ್ಥರು ಒಗ್ಗಟ್ಟಾಗಿ ಮಡಿಕೇರಿಯ ಅರಣ್ಯ ಭವನ ಎದುರು ಪ್ರತಿಭಟನೆ ಮಾಡಲಾಗುವುದು.
ದೇವದತ್ತ ಕಟ್ಟೆಕೋಡಿ, ಗ್ರಾ.ಪಂ. ಸದಸ್ಯ, ಕರಿಕೆ