ಜಿಲ್ಲೆ

ಕರಿಗಿರಿ ಕ್ಷೇತ್ರದಲ್ಲಿ ಕುಂಭಾಭಿಷೇಕಕ್ಕೆ ಚಾಲನೆ

ತುಮಕೂರು: ಇತಿಹಾಸ ಪ್ರಸಿದ್ಧ ದೇವರಾಯನದುರ್ಗದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭಾಭಿಷೇಕ ಹಾಗೂ ಕಳಸಾಭಿಷೇಕ ಮಹೋತ್ಸವ ಶನಿವಾರ ಆರಂಭವಾಯಿತು.

ಮಹೋತ್ಸವದಲ್ಲಿ ಭಾಗವಹಿಸಿದ್ದ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಕರಿಗಿರಿ ಕ್ಷೇತ್ರಕ್ಕೂ ಮಂತ್ರಾಲಯಕ್ಕೂ ನಿಕಟ ಸಂಬಂಧವಿದೆ. ದೇಗುಲದ ಅಭಿವೃದ್ಧಿ ವಿಚಾರಕ್ಕೆ ಶ್ರೀಮಠ ಸಿದ್ಧವಿದ್ದು, ಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ರಜತ ಕೊಪ್ಪರಿಗೆ ಹುಂಡಿ ಅರ್ಪಿಸಲಾಗಿದ್ದು, ಮಠದ ವತಿಯಿಂದ ಪೀಠ ನಿರ್ಮಿಸಿ ಕೊಡಲು ಸಂಕಲ್ಪ ಮಾಡಿರುವುದಾಗಿ ತಿಳಿಸಿದರು.

ಹಾವೇರಿಯ ವೇದ ವಿದ್ವಾಂಸ ವೇದವ್ಯಾಸಾಚಾರ್ ನಿರ್ಮಿಸಿರುವ ರಜತ ಕವಚ ಅರ್ಪಿಸಲಾಗಿದೆ ಎಂದರು. ತಹಸೀಲ್ದಾರ್ ಮೋಹನ್ ಮಾತನಾಡಿ, ಶಾಸ್ತ್ರೋಕ್ತವಾಗಿ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಮುಂದಾಗಿದೆ ಎಂದರು.

ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ದೇವರಾಯನದುರ್ಗ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಸವಿತಾ ಮಾತನಾಡಿ, ಮೂರು ದಿನಗಳಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಹೋತ್ಸವದ ಅಂಗವಾಗಿ ಆಚಾರ್ಯಾದಿ ಋತ್ವಿಗ್ವರಣ, ಸ್ವಸ್ತಿವಾಚನ, ಶುದ್ಧಿ ಪುಣ್ಯಾಹ, ರಕ್ಷಾಬಂಧನ, ಮೃತ್ಸಂಗ್ರಹಣ, ಅಂಕುರಾರ್ಪಣ ತದಂಗ ಹೋಮಗಳು, ವಾಸ್ತು ಆರಾಧನೆ, ವಾಸ್ತು ಹೋಮ, ಪರ್ಯಗ್ನಿ ಕರಣ, ಕಳಸ ಸ್ಥಾಪನ ಮಹಾನಿವೇದನ- ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ ಎಂದರು.

ಪೂಜಾ ಕಾರ್ಯಕ್ರಮದಲ್ಲಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಊರ್ಡಿಗೆರೆ ಕರಿಗಿರಿಯಪ್ಪ, ಅರ್ಚಕ ಡಿ.ಎನ್.ನರಸಿಂಹಭಟ್ಟರ್, ಆಗಮಿಕ ವಾಸುದೇವಭಟ್ಟರ್, ಕಂದಾಯಾಧಿಕಾರಿ ಪಿ.ಶಿವಣ್ಣ ಸೇರಿ ಸಾವಿರಾರು ಭಕ್ತರು ಭಾಗಿಯಾದರು.

ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿ ಸೇರಿ ಕ್ಷೇತ್ರದ ಎಲ್ಲ ಪೀಠಾಧಿಪತಿಗಳು ದೇವರಾಯನದುರ್ಗ ಕರಿಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದ ಬಗ್ಗೆ ಮಠದ ಇತಿಹಾಸದಲ್ಲಿ ಉಲ್ಲೇಖವಿದೆ. ಸಕಲ ಪಾಪ ದೋಷ ನಿವಾರಣೆಗೆ ಕರಿಗಿರಿ ಕ್ಷೇತ್ರ ಪ್ರಸಿದ್ಧವಾಗಿದೆ. ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳು ಮಂತ್ರಾಲಯದ ಪೀಠಾಧಿಪತಿ