ಕಿಕ್ಕೇರಿ ಹೋಬಳಿಯ ಸೊಳ್ಳೇಪುರ ಗ್ರಾಮದಲ್ಲಿ ಕರಿಬೀರೇಶ್ವರ ದೇವರ ಮುತ್ತಿನ ಪಲ್ಲಕ್ಕಿ ಮೆರವಣಿಗೆ ನಡೆಯಿತು.  
ಜಿಲ್ಲೆ

ಕರಿಬೀರೇಶ್ವರ ಮುತ್ತಿನ ಪಲ್ಲಕ್ಕಿ ಉತ್ಸವ

ಕಿಕ್ಕೇರಿ: ಹೋಬಳಿಯ ಸೊಳ್ಳೇಪುರ ಗ್ರಾಮದಲ್ಲಿ 10 ವರ್ಷಕ್ಕೊಮ್ಮೆ ನಡೆಯುವ ಆರೆಕಲ್ಲಮ್ಮದೇವಿ ಹಬ್ಬಕ್ಕೆ ಸೋಮವಾರ ರಾತ್ರಿ ಕರಿಬೀರೇಶ್ವರ ದೇವರ ಮೆರವಣಿಗೆಯೊಂದಿಗೆ ಚಾಲನೆ ದೊರೆಯಿತು.

ಮಳೆಯ ಆರ್ಭಟ ನಡುವೆಯೂ ಕರಿಬೀರದೇವರ ಮೆರವಣಿಗೆಗೆ ಭಕ್ತರು ಸಜ್ಜಾಗಿದ್ದರು. ಹಾಸನದ ದುದ್ದ ಬಳಿಯಿಂದ ದೇವರ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯೊಂದಿಗೆ ತರಲಾಯಿತು. ತದನಂತರ ಗ್ರಾಮದಲ್ಲಿ ಪೂಜಿಸಿ ಮುತ್ತಿನ ಪಲ್ಲಕ್ಕಿ ಮೇಲೆ ಕೂರಿಸಲಾಯಿತು. ದೇವರಿಗೆ ಹೆಜ್ಜೆಗೊಂದು ಈಡುಗಾಯಿ ಒಡೆಯಲಾಯಿತು. ಮಂಗಳವಾದ್ಯ, ಬಾಣಬಿರುಸುವಿನೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ದೇವರ ಭಂಟರಾದ ಸೋಮದೇವರ ಕುಣಿತ ಆಕರ್ಷಿಸಿತು.

ದೇವರ ಒಕ್ಕಲಿನವರು ಗದ್ದುಗೆ ನಿರ್ಮಿಸಿಕೊಂಡು ಕುರಿ, ಮೇಕೆ ಬಲಿ ನೀಡಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಮಂಗಳವಾರ ಬೆಳಗ್ಗೆ ಕರಿಬೀರೇಶ್ವರ ದೇವರಿಗೆ ಮಡಿಲುತುಂಬಿ ಸ್ವಸ್ಥಾನಕ್ಕೆ ಅರ್ಚಕರೊಂದಿಗೆ ಬೀಳ್ಕೊಡುಗೆ ನೀಡಲಾಯಿತು.

ಗ್ರಾಮಸ್ಥರು ಪಕ್ಷಬೇಧ ಮರೆತು ಒಗ್ಗಟ್ಟಿನಿಂದ ದೇವರಿಗೆ ಹಣ್ಣು, ಕಾಯಿ ಅರ್ಪಿಸಿ ಆರತಿ ಬೆಳಗಿ ಸಂಭ್ರಮದಿಂದ ಬರಮಾಡಿ ಕೊಂಡರು.