ಜಿಲ್ಲೆ

ಎಲ್ಲರನ್ನೂ ಪ್ರೀತಿಸಲಿದೆ ವೀರಶೈವ ಧರ್ಮ

ಕುಷ್ಟಗಿ: ಮಾನವ ಧರ್ಮದ ಉದ್ಧಾರಕರಾಗಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಅವತರಿಸಿದರು ಎಂದು ಮದ್ದಾನೇಶ್ವರ ಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಹಿರೇಮನ್ನಾಪುರದ ಶರಣಬಸವೇಸ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಜಂಗಮ ಸಮುದಾಯ ಏರ್ಪಡಿಸಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ರೇಣುಕಾಚಾರ್ಯರು ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಮನುಕುಲದ ಏಳಿಗೆ ಬಯಸಿ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದ್ದಾರೆ. ಎಲ್ಲರನ್ನು ಪ್ರೀತಿಸುವ ವೀರಶೈವ ಧರ್ಮವನ್ನು ಸ್ಥಾಪಿಸಿ ಧರ್ಮ ಜಾಗೃತಿ ಮೂಡಿಸಿದ್ದಾರೆ ಎಂದರು.

ನಿಡಶೇಸಿಯ ಶ್ರೀ ಅಭಿನವ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೇಣುಕಾಚಾರ್ಯರು ಜಂಗಮರಿಗೆ ಸೀಮಿತರಲ್ಲ. ರೇಣುಕರ ಇತಿಹಾಸ ತಿಳಿ ಹೇಳುವ ಕಾರ್ಯವಾಗಬೇಕಿದೆ. ಮಕ್ಕಳಿಗೆ ಲಿಂಗ ಪೂಜೆಯ ಮಹತ್ವ ತಿಳಿಸಿ ಸಂಸ್ಕಾರ ಕಲಿಸಿದರೆ ಅವರು ಧರ್ಮವಂತರಾಗುತ್ತಾರೆ. ಪ್ರತಿ ಗ್ರಾಮದಲ್ಲಿಯೂ ರೇಣುಕಾಚಾರ್ಯರ ಜಯಂತಿ ಆಚರಿಸುವ ಅಗತ್ಯವಿದೆ ಎಂದರು.

ರೇಣುಕಾಚಾರ್ಯರ ವೃತ್ತ ಉದ್ಘಾಟಿಸಿ ಮಾತನಾಡಿದ ಚಳಗೇರಿಯ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವನ ಪಂಚ ಮುಖಗಳಲ್ಲಿ ಅವತರಿಸಿದ ಪಂಚ ಪೀಠಾಧೀಶ್ವರರು ಜಗತ್ತಿನಾದ್ಯಂತ ಧರ್ಮ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

ಸೌಹಾರ್ದತೆಯ ಸಂಕೇತವಾಗಿ ಕಾರ್ಯಕ್ರಮದಲ್ಲಿ ಗ್ರಾಮದ ವಿವಿಧ ಸಮುದಾಯದ ತಲಾ ಒಬ್ಬರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದಕ್ಕೂ ಮುನ್ನ ಗ್ರಾಮದ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯಿಂದ ಆರಂಭಗೊಂಡ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಶರಣಬಸವೇಶ್ವರ ದೇವಸ್ಥಾನ ತಲುಪಿತು. ಕರಡಿ ಮಜಲು, ನಂದಿಕೋಲು ಕುಣಿತ ಹಾಗೂ ವಿವಿಧ ವಾದ್ಯ ವೃಂದದೊಂದಿಗೆ ನಡೆದ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಹೊತ್ತು ಸಾಗಿದರು.

ಎಂ.ಗುಡದೂರಿನ ನೀಲಕಂಠ ಸ್ವಾಮೀಜಿ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಮಹಾಂತಯ್ಯ ಹಿರೇಮಠ, ಪುರಸಭೆ ಸದಸ್ಯ ನಾಗರಾಜ ಹಿರೇಮಠ, ಪ್ರಮುಖರಾದ ವಿಜಯಕುಮಾರ ಹಿರೇಮಠ, ಜಂಗಮ ಸಮುದಾಯದ ಗ್ರಾಮ ಘಟಕದ ಅಧ್ಯಕ್ಷ ವಿರೂಪಾಕ್ಷಯ್ಯ ಹಿರೇಮಠ, ಪ್ರಮುಖರಾದ ದೊಡ್ಡಯ್ಯ ಗದ್ದಡಕಿಮಠ, ವೀರಸಬಸಯ್ಯ ಕಾರಡಗಿಮಠ, ಗುರುಬಸಯ್ಯ ಹಿರೇಮಠ, ನೀಲಕಂಠಯ್ಯ ಹಿರೇಮಠ, ವೀರಯ್ಯ ಹಿರೇಮಠ, ಶರಣಗೌಡ ಮಾಲಿಪಾಟೀಲ್, ಮಹಾಂತೇಶ ಹಿರೇಮಠ, ದೊಡ್ಡಬಸಯ್ಯ ಹಿರೇಮಠ, ಶಿವಾನಂದ ಹಿರೇಮಠ, ಬಸವರಾಜ ಹಿರೇಮಠ, ಸುರೇಶ ಕಾರಡಗಿಮಠ, ಶಿವಕುಮಾರ ಹಿರೇಮಠ, ಕಳಕಪ್ಪ ಪುರದ್, ದೊಡ್ಡಪ್ಪ ಬಳೂಟಗಿ, ದೇವಣ್ಣ ಬಳಿಗಾರ, ಕಳಕಪ್ಪ ಬಳೂಟಗಿ, ಪುಂಡಲೀಕಪ್ಪ ಬುಡಕುಂಟಿ ಇತರರು ಇದ್ದರು.