ಮುಂಡರಗಿ: ಪಟ್ಟಣದ ಕೋಟೆಭಾಗದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಬುಧವಾರ ಸಂಜೆ ಎತ್ತುಗಳಿಂದ ಕರಿ ಹರಿಯಲಾಯಿತು.
ಕೋಟೆಭಾಗದ ಅಗಸಿ ಬಾಗಿಲನ್ನು ತಳಿರು, ತೋರಣದಿಂದ ಸಿಂಗರಿಸಲಾಗಿತ್ತು. ಕಂದು ಮತ್ತು ಬಿಳಿ ಬಣ್ಣದ ಎತ್ತುಗಳನ್ನು ಕರಿ ಹರಿಯಲು ಕರೆತರಲಾಗಿತ್ತು. ಎತ್ತುಗಳನ್ನು ಬಿಡುವ ಸಮಯಕ್ಕೆ ಬೇವು, ತೆಂಗಿನಕಾಯಿ, ಹೂವಿನಿಂದ ಕಟ್ಟಿದ ಹುರಿಯನ್ನು ಹಿಡಿಯಲಾಗಿತ್ತು. ರೈತ ಶಿವಪ್ಪ ಹೂಗಾರ ಅವರ ಬಿಳಿ ಹೋರಿ ಕರಿ ಹರಿಯಿತು.
ಕರಿ ಹರಿದ ಹೋರಿಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕರಿ ಹರಿಯುವುದನ್ನು ವೀಕ್ಷಿಸಲು ಕೋಟೆಭಾಗದ ಹಿರಿಯರು, ಯುವಕರು, ಮಹಿಳೆಯರು ಸೇರಿ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.