ಜಿಲ್ಲೆ

ಸಮರ್ಪಣಾಭಾವದ ಕೆಲಸದಿಂದ ಗೆಲುವು - ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಬಣ್ಣನೆ

Mangaluru - Nishantha Narayana

ಪುತ್ತೂರು: ಶಾಲೆ ಕಾಲೇಜು ನೀಡುವ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಜೀವನದ ಅನುಭವಗಳು ನಮ್ಮನ್ನು ಎತ್ತರಕ್ಕೆ ಏರಿಸುವ ಕಾರ್ಯ ಮಾಡುತ್ತದೆ. ಸೇನೆಯಲ್ಲಿನ ಹಲವು ಸವಾಲುಗಳನ್ನು ಎದುರಿಸುವ ಸನ್ನಿವೇಶ ಕಾರ್ಗಿಲ್ ಯುದ್ಧದ ಸಂದರ್ಭ ಬಂದಿದ್ದು, ಎಲ್ಲ್ಲ ಯೋಧರ ಸಮರ್ಪಣಾ ಭಾವದ ಕೆಲಸದಿಂದ ವಿಜಯ ಲಭಿಸಿದೆ. ಯುವ ಸೇನಾಽಕಾರಿಗಳು ಅಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದು, ವಿಜಯ ದಿವಸ ಆಚರಣೆಗಳ ಮೂಲಕ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಲಭಿಸಬಹುದು ಎಂದು ಮಾಜಿ ರಾಷ್ಟ್ರಪತಿ ಡಾ. ಎ.ಪೀ.ಜೆ ಅಬ್ದುಲ್ ಕಲಾಂರ ರಕ್ಷಣಾ ಸಲಹೆಗಾರರಾಗಿದ್ದ ಲೆಪ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಎಚ್. ಹೇಳಿದರು,


ಶುಕ್ರವಾರ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸ ಇದರ ೨೫ನೇ ವರ್ಷಾಚರಣೆ ಅಂಗವಾಗಿ ಯೋಧ ನಮನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ಭಾರತೀಯ ಸೈನ್ಯದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ವಿವೇಕಾನಂದ ಸಂಸ್ಥೆಗಳ ಮಕ್ಕಳ ಪಾಲಕರನ್ನು ಗುರುತಿಸಿ, ಗೌರವಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದಿಂದ ದೇಶ ಭಕ್ತಿ ಗಾನ ಸುಧೆ ವಿಶೇಷ ಕಾರ್ಯಕ್ರಮ ನಡೆಯಿತು.
ಪುಣಚ ಶ್ರೀದೇವಿ ವಿದ್ಯಾಕೇಂದ್ರದ ಅಧ್ಯಕ್ಷ ಜಯಶ್ಯಾಮ ನೀರ್ಕಜೆ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ, ನರೇಂದ್ರ ಪದವಿ ಪೂರ್ವ ಕಾಲೇಜು ಅಧ್ಯಕ್ಷ ಶ್ರೀಕಾಂತ ಕೊಳತ್ತಾಯ, ಬಿ ಎಡ್ ಶಿಕ್ಷಣ ಮಹಾವಿದ್ಯಾಲಯ ಅಧ್ಯಕ್ಷ ಸುಧಾಕರ ರೈ ಕುಂಜಾಡಿ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅಗಮ್ಯ, ಆಕಾಂಕ್ಷ, ಸಿಂಚನ ಬಿ., ಸಿಂಚನ ಕೆ. ಎಸ್., ತನ್ಮಯಿ ಪ್ರಾರ್ಥಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್ ಎಂ. ಸ್ವಾಗತಿಸಿದರು. ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ವಂದಿಸಿದರು. ಸಹ ಶಿಕ್ಷಕರಾದ ಗಣೇಶ್ ಏತಡ್ಕ, ಸೌಮ್ಯಕುಮಾರಿ ಕಾರ್ಯಕ್ರಮ ನಿರೂಪಿಸಿದರು.