ವಿಜಯಪುರ: ಸ್ವಾತಂತ್ರೃ ಭಾರತದ ಇತಿಹಾಸದಲ್ಲಿ ಮೈಲಿಗಲ್ಲಾದ ಕಾರ್ಗಿಲ್ ಯುದ್ದದ ಸವಿನೆನಪಿಗಾಗಿ ಆಚರಿಸಲ್ಪಡುವ ‘ಕಾರ್ಗಿಲ್ ವಿಜಯೋತ್ಸವ’ವನ್ನು ಶುಕ್ರವಾರ ಜಿಲ್ಲಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ವಿಭಿನ್ನ ಹಾಗೂ ವಿಶಿಷ್ಟವಾಗಿ ಆಚರಿಸಲಾಯಿತು. ಶಾಲೆ-ಕಾಲೇಜ್‌ಗಳಲ್ಲಿ ವಿಶೇಷ ಉಪನ್ಯಾಸ ಏರ್ಪಡಿಸಲಾಯಿತು. ಹುತಾತ್ಮ ವೃತ್ತಗಳಲ್ಲಿ ತ್ರಿವರ್ಣ ಧ್ವಜ ಆರೋಹಣಗೊಳಿಸಲಾಯಿತು. ದೇಶ ಭಕ್ತಿಗೀತೆಗಳ ಸ್ಪರ್ಧೆ, ಹುತಾತ್ಮರ ಸ್ಮರಣೆ, ಸೈನಿಕರಿಗೆ ಸತ್ಕಾರ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಗಮನ ಸೆಳೆದವು.
ಸಾಮಾಜಿಕ ಜಾಲತಾಣಗಳಲ್ಲಿ ಹುತಾತ್ಮ ಯೋಧರ ಫೋಟೊಗಳು ರಾರಾಜಿಸಿದವು. ಕಾರ್ಗಿಲ್ ಸ್ತೂಪ್‌ದ ಚಿತ್ರಗಳನ್ನು ಹರಿಬಿಟ್ಟು ಅಭಿಮಾನ ವ್ಯಕ್ತಪಡಿಸಲಾಯಿತು. ವೀರ ಯೋಧರ ಕುಟುಂಬಸ್ಥರನ್ನು ಸ್ಮರಿಸಲಾಯಿತು. ಕೆಲವು ಕಡೆ ಹುತಾತ್ಮ ಯೋಧರ ಕುಟುಂಬಸ್ಥರಿಗೆ ಸನ್ಮಾನಿಸಲಾಯಿತು.
ನಗರದ ಸೈನಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ವಿನೂತನವಾಗಿ ಆಚರಿಸಲಾಯಿತು.
ಪ್ರಾಂಶುಪಾಲೆ, ಗ್ರುಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ್ ಅವರು ಕಾರ್ಗಿಲ್ ವಿಜಯ ಸ್ತೂಪ್‌ಕ್ಕೆ ವಿಶೇಷ ನಮನ ಸಲ್ಲಿಸಿದರು. ಬಳಿಕ ಮಾತನಾಡುತ್ತಾ, ಕಾರ್ಗಿಲ್ ವಿಜಯೋತ್ಸವ ಭಾರತೀಯರ ಶೌರ್ಯ ಮತ್ತು ಪರಾಕ್ರಮದ ಪ್ರತೀಕ. ಪಾಕಿಸ್ತಾನದ ವಿರುದ್ಧ ಗಳಿಸಿದ ಬೃಹತ್ ವಿಜಯದ ಸಂಕೇತ. ಅದನ್ನು ನಾವೆಲ್ಲರೂ ಸಂಭ್ರಮದಿಂದ ಆಚರಿಸೋಣ. ಹುತಾತ್ಮರನ್ನು ಸ್ಮರಿಸೋಣ. ಅವರ ಕುಟುಂಬಸ್ಥರನ್ನೂ ಗೌರವಿಸೋಣ ಎಂದರು.
ಉಪ ಪ್ರಾಂಶುಪಾಲೆ, ಕಮಾಂಡರ್ ಮೀನಾ ಕುಮಾರಿ, ಸೀನಿಯರ್ ಮಾಸ್ಟರ್ ಪಿ.ಎಂ. ಶೆಟ್ಟಿ ಮತ್ತಿತರರಿದ್ದರು.
ನಗರದ ಪ್ರತಿಷ್ಠಿತ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಕ್ಕಳ ಪದಗ್ರಹಣ ಕಾರ್ಯಕ್ರಮ ಮತ್ತು ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಇವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಚೇರಮನ್ ಡಾ. ಸುರೇಶ ಬಿರಾದಾರ ಮಾತನಾಡಿ, ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸೋಣ. ಕಠಿಣ ಪರಿಶ್ರಮ, ಶಿಸ್ತು , ದೇಶಭಕ್ತಿ, ಆತ್ಮವಿಶ್ವಾಸ, ಪ್ರಾಮಾಣಿಕತೆ, ನಿರ್ಧಾರ ತೆಗೆದುಕೊಳ್ಳುವ ಗುಣ, ಸೃಜನಶೀಲತೆ ಮುಂತಾದ ಗುಣಗಳನ್ನು ಬೆಳೆಸಿಕೊಂಡು ದೇಶದ ಸತ್ಪ್ರಜೆಗಳಾಗೋಣ ಎಂದರು.
ಸಂಸ್ಥೆಯ ಅಧ್ಯಕ್ಷೆ ಶೀಲಾ ಬಿರಾದಾರ, ನಿರ್ದೇಶಕಿ ದಿವ್ಯಾ ಬಿರಾದಾರ ಮಾತನಾಡಿದರು.
ಪ್ರಾಚಾರ್ಯ ಶ್ರೀಧರ ಕುರಬೇಟ ಸ್ವಾಗತಿಸಿದರು. ಶಾಲಾ ನಾಯಕಿಯಾಗಿ ಪ್ರೇರಣಾ ಅಂಬಿಗೇರ, ಶ್ರೀರಕ್ಷಾ ಪಟ್ಟಣಶೆಟ್ಟಿ, ಕ್ರೀಡಾ ನಾಯಕನಾಗಿ ಶೌರ್ಯ ಅಂಗಡಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಶಿಕ್ಷಕರಾದ ಎ.ಎಚ್. ಸಗರ, ಪ್ರವೀಣ ಗೆಣ್ಣೂರ, ಅನೀಲ ಬಾಗೆವಾಡಿ, ಅಶ್ವೀನ ವಗದರಗಿ, ಶ್ರೀದೇವಿ ಜೋಳದ, ಸೀಮಾ ಸದಲಗ, ಸರೋಜಾ ಕರಕಳ್ಳಿ, ಹೀನಾ ಕೌಸರ ಮತ್ತಿತರರಿದ್ದರು. ಶಿಕ್ಷಕಿ ತಬಸುಮ್ ಸಾಂಗ್ಲೀಕರ್, ಅಲ್ತಾಫ ಪಟೇಲ ನಿರೂಪಿಸಿದರು.