ಜಿಲ್ಲೆ

ದೇಶ ರಕ್ಷಕ ಯೋಧ ಆದರ್ಶ - ಕಾರ್ಗಿಲ್ ವಿಜಯೋತ್ಸವ ವರ್ಷಾಚರಣೆಯಲ್ಲಿ ಯೋಗೀಂದ್ರ ಸಿಂಗ್ ಯಾದವ್ ಆಶಯ

Mangaluru - Nishantha Narayana


ಪುತ್ತೂರು: ಅಮೂಲ್ಯವಾದ ಜೀವನವನ್ನು ಸ್ಪಷ್ಟ ಗುರಿಯೊಂದಿಗೆ ರೂಪಿಸಿಕೊಳ್ಳಬೇಕು. ಇಂದು ಸಿನೆಮಾ ನಟರನ್ನು, ಕ್ರಿಕೆಟಿಗರನ್ನು ಹೀರೋಗಳಾಗಿ ಕಾಣುತ್ತಿದ್ದು, ನಮಗಾಗಿ ಪ್ರಾಣತೆತ್ತ ಯೋಧರನ್ನು ನಿರ್ಲಕ್ಷಿಸುತ್ತಿದ್ದೇವೆ. ನಮ್ಮನ್ನು ಕಾಪಾಡುವ ಹಾದಿಯಲ್ಲಿ ಜೀವ ಅರ್ಪಿಸಿದ ಯೋಧರನ್ನು ಆದರ್ಶವಾಗಿ ಸ್ವೀಕರಿಸಬೇಕು ಎಂದು ಪರಮವೀರ ಚಕ್ರ ಪುರಸ್ಕೃತ ಕ್ಯಾಪ್ಟನ್ ಯೋಗೀಂದ್ರ ಸಿಂಗ್ ಯಾದವ್ ಹೇಳಿದರು.


ಶುಕ್ರವಾರ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರಿನ ಮಾಜಿ ಸೈನಿಕರ ಸಂಘ, ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಡೆದ ಕಾರ್ಗಿಲ್ ವಿಜಯೋತ್ಸವದ ಇಪ್ಪತ್ತೈದನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಹುಬ್ಬಳ್ಳಿಯ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಮಾತನಾಡಿ ಪಾಕಿಸ್ಥಾನಕ್ಕೆ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನ್ಯ ಕೊಟ್ಟ ಹೊಡೆತ ಎಷ್ಟು ತೀವ್ರವಾಗಿತ್ತೆಂದರೆ ಅನಂತರದ ಈ ಇಪ್ಪತ್ತೈದು ವರ್ಷಗಳಲ್ಲಿ ಪಾಕಿಸ್ಥಾನ ಯುದ್ಧಕ್ಕೆ ಬರುವ ಧೈರ್ಯವನ್ನೇ ತೋರಿಸಿಲ್ಲ. ಭಾರತೀಯ ಸೈನಿಕರು ನೈತಿಕ ಹಾದಿಯಲ್ಲೇ ಮುಂದುವರೆಯುತ್ತಾರೆಂಬುದೇ ಬಹುದೊಡ್ಡ ಆತ್ಮಶಕ್ತಿ. ಕಾರ್ಗಿಲ್ ಯುದ್ಧದ ಆರಂಭಿಕ ದಿನಗಳಲ್ಲಿ ಬೆಟ್ಟದ ಮೇಲೆ ಏನಾಗುತ್ತಿದೆ ಎಂಬುದೇ ಅರಿವಾಗುತ್ತಿರಲಿಲ್ಲ ಎಂದರು.

ಕ್ಯಾಪ್ಟನ್ ಯೋಗೀಂದ್ರ ಸಿಂಗ್ ಯಾದವ್ ಹಾಗೂ ಕ್ಯಾಪ್ಟನ್ ನವೀನ್ ನಾಗಪ್ಪ ಅವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ, ಸೇನಾ ಪದಕದ ಚಿನ್ನದ ಪ್ರತಿರೂಪ ನೀಡಿ ಗೌರವಿಸಲಾಯಿತು. ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.

ದರ್ಬೆ ವೃತ್ತದ ಬಳಿಯಿಂದ ಕಿಲ್ಲೆ ಮೈದಾನದವರೆಗೆ ಬೃಹತ್ ಮೆರವಣಿಗೆ ನಡೆಯಿತು. ಇಬ್ಬರು ಕಾರ್ಗಿಲ್ ಯೋಧರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಹಲವು ಮಂದಿಯಿಂದ ಹಾರಾರ್ಪಣೆ ನಡೆಯಿತು. ಮಾಜಿ ಸೈನಿಕರ ಸಂಘದಿಂದ ಕಾರ್ಗಿಲ್ ಯೋಧರಿಗೆ ಗೌರವ ಸಮರ್ಪಣೆ ನಡೆಯಿತು. ಅಮರ್ ಜವಾನ್ ಜ್ಯೋತಿಯಲ್ಲಿ ರೀತ್ ಸಮರ್ಪಣೆ ನೆರವೇರಿತು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ. ಕೆ. ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಶಕುಂತಳಾ ಟಿ. ಶೆಟ್ಟಿ, ಸಂಜೀವ ಮಠಂದೂರು, ನಗರಸಭಾ ಆಯುಕ್ತ ಮಧು ಎಸ್. ಮನೋಹರ್, ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್ ಎಸ್. ಆರ್. ಉಪಸ್ಥಿತರಿದ್ದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಸ್ವಾಗತಿಸಿದರು.ವಕೀಲ ಮಹೇಶ್ ಕಜೆ ವಂದಿಸಿದರು. ಉಪನ್ಯಾಸಕ ಆದರ್ಶ ಗೋಖಲೆ ಕಾರ್ಯಕ್ರಮ ನಿರೂಪಿಸಿದರು.