ಜಿಲ್ಲೆ

ಕಾರ್ಗಿಲ್ ವಿಜಯೋತ್ಸವ ದೇಶದ ಅಸ್ಮಿತೆ: ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿಕೆ

ಮಂಡ್ಯ: ಕಾರ್ಗಿಲ್ ವಿಜಯೋತ್ಸವ ಭಾರತೀಯರ ಅಸ್ಮಿತೆ ಹಾಗೂ ದೇಶಪ್ರೇಮದ ಪ್ರತೀಕ ಎಂದು ಮೈಸೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ನಗರದ ಗಾಂಧಿಭವನದಲ್ಲಿ ಕಲಾತಪಸ್ವಿ ಟ್ರಸ್ಟ್, ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಶನ್, ಚಿದಂಬರ ನಟೇಶನಾಟ್ಯ ಶಾಲೆ, ಎಂವಿಜಿ ಬೇಕರಿ ಸ್ವೀಟ್ಸ್ ಸಹಯೋಗದಲ್ಲಿ ಆಯೋಜಿಸಿದ್ದ 24ನೇ ವರ್ಷದ ಪ್ರಜ್ಞಾಭಾರತ ಕಾರ್ಗಿಲ್ ವಿಜಯೋತ್ಸವ ಮತ್ತು ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಭಾರತೀಯರು 1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಹಾಗೂ ಮಡಿದ ಸೈನಿಕರಿಗೆ ಗೌರವ ಸಲ್ಲಿಸುವುದು ಕರ್ತವ್ಯ. ಅಂದು ಯುದ್ಧದಲ್ಲಿ ವೀರ ಮರಣ ಹೊಂದಿದ ಸೈನಿಕರ ತ್ಯಾಗ, ಬಲಿದಾನವನ್ನು ಸ್ಮರಿಸಿಕೊಳ್ಳದ ಮನಸ್ಸು ದೇಶಪ್ರೇಮಕ್ಕಾಗಿ ತುಡಿಯದು ಎಂದು ನುಡಿದರು.

ಈ ಯುದ್ಧದಲ್ಲಿ ಭಾರತೀಯ ಸೇನೆಯ ಪ್ರಮುಖ ಅಧಿಕಾರಿಗಳು ಸೇರಿದಂತೆ 527 ಸೈನಿಕರು ವೀರಮರಣ ಹೊಂದಿದರು. ಪಾಕಿಸ್ತಾನದ ಸೈನಿಕರು ಮತ್ತು ಉಗ್ರರು ಕಾರ್ಗಿಲ್ ಜಿಲ್ಲೆಯ ಎಲ್‌ಒಸಿ ಮೂಲಕ ಒಳ ಪ್ರವೇಶಿಸಿದ್ದರು. ಇದು ಭಾರತದ ಸೇನೆಗೆ ಗೊತ್ತಾಗಿ ತಕ್ಷಣ ಪ್ರತಿದಾಳಿ ಆರಂಭಿಸಿತು. ಪಾಕಿಸ್ತಾನದ ಈ ಯುದ್ಧ ಭಾರತಕ್ಕೆ ನಿರೀಕ್ಷಿತವಾಗಿರಲಿಲ್ಲ. ಆದರೂ, ಭಯಪಡದೆ ಆಪರೇಷನ್ ವಿಜಯ್ ಆರಂಭಿಸಿ ಗೆಲುವು ತಂದ ಸೈನಿಕರನ್ನು ಸ್ಮರಿಸೋಣ. ಕಾರ್ಗಿಲ್ ಯುದ್ಧವು 18,000 ಅಡಿ ಎತ್ತರದ ಪ್ರದೇಶಗಳಲ್ಲಿ ನಡೆಯಿತು. ಯುದ್ಧಕ್ಕೆ ಸವಾಲಿನ ಹಾಗೂ ಅಪಾಯಕಾರಿ ಸ್ಥಳದಲ್ಲಿ ಹೋರಾಟ ನಡೆಸಿ ಗೆಲುವು ಸಾಧಿಸಿದರು ಎಂದು ಹೇಳಿದರು.

ಅಂದು ಭಾರತದ ಪ್ರಧಾನಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ದಿಟ್ಟ ನಿರ್ಧಾರದಿಂದ ಸೈನಿಕರು ಕಠಿಣ ಪ್ರದೇಶವಾದ ಕಾರ್ಗಿಲ್ ಪ್ರದೇಶದಲ್ಲಿ ಹೋರಾಡಿ ಭಾರತೀಯರಿಗೆ ಗೆಲುವು ಸಮರ್ಪಿಸಿದರು. ಈ ಯುದ್ಧದಿಂದ ಎರಡೂ ಕಡೆಗಳಲ್ಲಿ ಅಪಾರ ಹಾನಿ ಉಂಟಾಗಿತ್ತು. ಯುದ್ಧದಲ್ಲಿ ಫಿರಂಗಿ, ವಾಯುದಳ ಹಾಗೂ ಸೈನಿಕರ ಕಾರ್ಯಾಚರಣೆ ಇತ್ತು. ಯುದ್ಧದ ಸಮಯದಲ್ಲಿ ಭಾರತೀಯ ವಾಯುಪಡೆಯು ವೈಮಾನಿಕ ಬೆಂಬಲವನ್ನು ಸೂಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. ವಾಯುದಾಳಿಗಳ ಮೂಲಕ ಶತ್ರುಪಡೆಗಳನ್ನು ಹಿಮ್ಮೆಟ್ಟಿಸಿತ್ತು ಎಂದು ತಿಳಿಸಿದರು.

ಭಾರತೀಯ ಸೇನಾ ಅಧಿಕಾರಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಯುದ್ಧದ ಸಮಯದಲ್ಲಿ ಅವರ ಶೌರ್ಯ ಮತ್ತು ಧೈರ್ಯಶಾಲಿ ಕಾರ್ಯಗಳಿಗಾಗಿ ರಾಷ್ಟ್ರೀಯ ನಾಯಕರಾದರು. ಯೇ ದಿಲ್ ಮಾಂಗೆ ಮೋರ್ ಎಂಬ ಅವರ ಪ್ರಸಿದ್ಧ ನುಡಿ ಅಪ್ರತಿಮ ಘೋಷವಾಕ್ಯವಾಗಿದೆ. ಇಂದಿನ ವಿದ್ಯಾರ್ಥಿಗಳು ದೇಶಪ್ರೇಮವನ್ನು ಮೆರೆಯಬೇಕಿದೆ. ಜತೆಗೆ ಸೈನಿಕರಾಗುವ ಅವಕಾಶ ಸೃಷ್ಠಿಸಿಕೊಳ್ಳಬೇಕಿದೆ. ಪಾಲಕರು ಒತ್ತಾಸೆಯಾಗಿ ನಿಂತರೆ ಸೈನಿಕರಾಗುವ ಹಂಬಲ ಹೆಚ್ಚುತ್ತದೆ. ಪ್ರಸ್ತುತ ಭಾರತ ಸರ್ಕಾರವು ತನ್ನ ವಾರ್ಷಿಕ ಬಜೆಟ್‌ನಲ್ಲಿ ಒಟ್ಟು ರಕ್ಷಣಾ ಬಜೆಟ್ ಮೊತ್ತ 5.94 ಲಕ್ಷ ಕೋಟಿ ರೂಗಳಾಗಿದೆ. ಸೇನಾ ಆಧುನೀಕರಣಕ್ಕೆ ಬಂಡವಾಳ ಹೂಡಿಕೆಗೆ 1.62 ಲಕ್ಷ ಕೋಟಿ ರೂ ನೀಡಲಾಗಿದೆ. ಕಳೆದ ವರ್ಷ ಬಜೆಟ್‌ನಲ್ಲಿ ನೀಡಿದ ಶೇ.16ರಷ್ಟು ಹೆಚ್ಚಿನ ಅನುದಾನವಾಗಿದೆ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಗೆ 18,440 ಕೋಟಿ ರೂ ಹಾಗೂ ಅದೇ ಸಮಯದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಇತರೆ ವೆಚ್ಚಗಳಿಗಾಗಿ ಸುಮಾರು 38,714 ಕೋಟಿ ರೂ ಮೀಸಲಿಡಲಾಗುತ್ತದೆ. ಸೇನಾ ಆಧುನೀಕರಣಕ್ಕೆ ಬಂಡವಾಳ ಹೂಡಿಕೆಗೆ 1.62 ಲಕ್ಷ ಕೋಟಿ ರೂ ನೀಡಲಾಗಿದೆ ಎಂದು ವಿವರಿಸಿದರು.

ಬಜರಂಗ ಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್, ಫೌಂಡೇಶನ್ ಅಧ್ಯಕ್ಷ ಶ್ರೀಕಂಠೇಗೌಡ, ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ವ್ಯವಸ್ಥಾಪಕ ಮಂಜು, ರೋಟರಿ ಜಿಲ್ಲಾ ಸಹಪಾಲಕ ಸಿ.ಪ್ರಶಾಂತ್, ಕಲಾತಪಸ್ವಿ ಟ್ರಸ್ಟ್ ಪೋಷಕ ಮದ್ದೂರು ಮನು, ಕಾರ್ಯದರ್ಶಿ ಅನಿಲ್ ಕುಮಾರ್, ರವೀಂದ್ರ, ವಿದ್ಯಾಶ್ರೀ, ಲಾವಣ್ಯ, ದಿವ್ಯಾನಂದ, ಲೋಹಿತ್‌ಕುಮಾರ್, ಉಲ್ಲಾಸ್‌ಗೌಡ ಇತರರಿದ್ದರು.

ಇದೇ ಸಂದರ್ಭದಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ಜಾನಪದ ಗಾಯಕ ಗೊರವಾಲೆ ಚಂದ್ರಶೇಖರ್ ಮತ್ತು ತಂಡದವರಿಂದ ದೇಶಭಕ್ತಿಗೀತೆಗಳನ್ನು ಹಾಡಿದರು. ಎಲ್ಲರೂ ದೀಪ ಬೆಳಗಿ ವೀರ ಸೈನಿಕರಿಗೆ ನಮನ ಸಲ್ಲಿಸಿದರು.