ಜಿಲ್ಲೆ

ಜು.26ರಂದು ಕದ್ರಿ ಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

Mangaluru - Hariprasad Rai




ಮಂಗಳೂರು : ದ.ಕ.ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಜು.26ರಂದು ನಗರದ ಕದ್ರಿ ಹಿಲ್ಸ್‌ನಲ್ಲಿರುವ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ ನಡೆಯಲಿದೆ.
ಜು.26ರಂದು ಸಾಯಂಕಾಲ 6.30ಕ್ಕೆ ಕಾರ್ಗಿಲ್ ಯುದ್ಧದ ರಜತ ವರ್ಷಾಚರಣೆ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ
ಯೋಧರಿಗೆ ದೀಪ ಬೆಳಗಿಸಿ ನಮನ ಸಲ್ಲಿಸಲಾಗುವುದು. ದ್ವಿಚಕ್ರ ವಾಹನಗಳ ರ‌್ಯಾಲಿ ನಡೆಯಲಿದೆ. ಮಾಜಿ ಸೈನಿಕರ ಕುಟುಂಬಗಳ ಕ್ಷೇಮಕ್ಕಾಗಿ
ಧನ ಸಹಾಯವನ್ನು ಸುರತ್ಕಲ್‌ನ ರಾಷ್ಟ್ರ ಭಕ್ತ ನಾಗರಿಕ ವೇದಿಕೆ ವತಿಯಿಂದ ನೀಡಲಾಗುವುದೆಂದು ದ.ಕ.ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಗ್ರ ಕಲಿಕಾ ಕೇಂದ್ರ (ಸಿಐಎಲ್) ಇದರ ಸಹಯೋಗದಲ್ಲಿ ಕಾರ್ಗಿಲ್ ಯುದ್ಧದ ರಜತೋತ್ಸವದ ಅಂಗವಾಗಿ ಆ.8ರಂದು ನಗರದ ಗುಜರಾತಿ ಶಾಲೆಯಲ್ಲಿ, ಶಾಲಾ ಮಕ್ಕಳೊಂದಿಗೆ ನಿವೃತ್ತ ಸೈನಿಕರ ಸಮಾವೇಶ ಆಯೋಜಿಸಲಾಗಿದೆ. ಈ ಸಂದರ್ಭ ರಸಪ್ರಶ್ನೆ ಸ್ಪರ್ಧೆ, ವಿಡಿಯೋ ಪ್ರದರ್ಶನದಲ್ಲಿ ಭಾರತದ ಬೇರೆ ಬೇರೆ ಯುದ್ಧಗಳ ಚಿಕ್ಕ ತುಣುಕು ಪ್ರದರ್ಶಿಸಲಾಗುವುದು. ರಾಷ್ಟ್ರ ಪ್ರೇಮದ ಬಗ್ಗೆ ಹಾಡುಗಳು ಮತ್ತು ನೃತ್ಯ ಪ್ರದರ್ಶನ, ಮಾಜಿ ಯೋಧರಿಗೆ ಸನ್ಮಾನ ನೆರವೇರಲಿದೆ ಎಂದು ಸಿಐಎಲ್ನ ನಿರ್ದೇಶಕಿ ಸಚಿತಾ ನಂದಗೋಪಾಲ್ ತಿಳಿಸಿದರು.
ಸಂಘದ ಮಾಜಿ ಅಧ್ಯಕ್ಷ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಮಾತನಾಡಿ ಇಂದಿಗೂ ಕಾರ್ಗಿಲ್ ಯುದ್ಧವು ಭಾರತೀಯ ಯೋಧರ ಧೈರ್ಯ,ತ್ಯಾಗ, ಬಲಿದಾನಗಳ ಅದ್ಭುತ ಸಂಕೇತವಾಗಿ ಪರಿಣಮಿಸಿದೆ. ಅಸಾಧ್ಯವೆಂದು ಭಾವಿಸಿರುವ ಗುರಿಯನ್ನು ಪ್ರತಿಕೂಲ ಪರಿಸ್ಥಿತಿಯಲ್ಲೂ ಸಾಧ್ಯವಾಗಿಸಿದ ಅಮೃತ ಘಳಿಗೆಯಾಗಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ದೀಪಕ್ ಅಡ್ಯಂತಾಯ, ಕೋಶಾಧಿಕಾರಿ ಸಿಪಿಒ ಸುಧೀರ್ ಪೈ ಉಪಸ್ಥಿತರಿದ್ದರು .,,,,,,,,,,,,,,,,,,,,