ಜಿಲ್ಲೆ

ಕಾರ್ಗಿಲ್ ವಿಜಯೋತ್ಸವ ನಾಳೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ನಿಮಿತ್ತ ನಗರದ ಕಾರ್ಗಿಲ್ ಸ್ಮಾರಕ ಸಮಿತಿ ವತಿಯಿಂದ ಜು. 26ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಕಾರ್ಗಿಲ್ ಸ್ತೂಪ ಬಳಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಚಂದ್ರಶೇಖರ ಅಮೀನಗಡ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಯರ್​ ರಾಮಣ್ಣ ಬಡಿಗೇರ ಹಾಗೂ 13 ಜನ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ವರ್ಷ ಕಾರ್ಗಿಲ್ ವಿಜಯದ ರಜತ ಮಹೋತ್ಸವ ಇರುವುದು ವಿಶೇಷ. ಹೀಗಾಗಿ ಅಂದು ಇಡೀ ದಿನ ಕಾರ್ಯಕ್ರಮಗಳ ಆಯೋಜನೆ ಜತೆಗೆ 25 ಶಾಲಾ-ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.
ಸಮಿತಿ ಸದಸ್ಯ ಆನಂದ ಕುಲಕರ್ಣಿ ಮಾತನಾಡಿ, ಕಾರ್ಗಿಲ್ ಯುದ್ಧ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡಲು ನಿಟ್ಟಿನಲ್ಲಿ ಹಾಗೂ ರಜತ ಮಹೋತ್ಸವ ನಿಮಿತ್ತ ಶಾಲೆ-ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿನ ಪ್ರತಿ ಶಾಲೆ-ಕಾಲೇಜಿಗೆ ಒಬ್ಬ ಮಾಜಿ ಯೋಧರನ್ನು ಅತಿಥಿಯಾಗಿ ಆಹ್ವಾನಿಸಿ ಸನ್ಮಾನಿಸಲಾಗುವುದು. ಅವರು ಮಕ್ಕಳಿಗೆ ಸೈನ್ಯ, ಯದ್ಧ ಹಾಗೂ ಕಾರ್ಗಿಲ್ ವಿಜಯದ ರೋಮಾಂಚನ ಸಂಗತಿಗಳ ಮಾಹಿತಿ ನೀಡಲಿದ್ದಾರೆ ಎಂದರು.
ವಸಂತ ಅರ್ಕಾಚಾರ ಮಾತನಾಡಿ, ಕಾರ್ಗಿಲ್ ಸ್ತೂಪವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ. ಇದಲ್ಲದೆ ವೀರ ಯೋಧರಾದ ಜನರಲ್​ ಕೆ.ಎಂ. ಕಾರ್ಯಪ್ಪ, ಜನರಲ್​ ಕೆ.ಎಸ್​. ತಿಮ್ಮಯ್ಯ, ಜನರಲ್​ ಜಿ.ಜಿ. ಬೇವೂರ ಪುತ್ಥಳಿಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ಪುತ್ಥಳಿಗಳು ಸಿದ್ಧವಾಗಿದ್ದು, ಪಾಲಿಕೆ ಹಾಗೂ ಜಿಲ್ಲಾಡಳಿತದ ಜತೆಗೆ ಚರ್ಚಿಸಿ ಮುಂದಿನ ತಿಂಗಳಲ್ಲಿ ಸ್ಥಾಪನೆ ಮಾಡುವ ಯೋಚನೆ ಇದೆ ಎಂದರು.
ಮಲ್ಲಿಕಾರ್ಜುನ ಚಿಕ್ಕಮಠ ಮಾತನಾಡಿ, ಕಾರ್ಗಿಲ್ ವಿಜಯೋತ್ಸವವನ್ನು ಪ್ರತಿ ವರ್ಷ ಎಲ್ಲೆಡೆ ಆಚರಿಸಲಾಗುತ್ತದೆ. ಆದರೆ ಈ ಯುದ್ಧದ ಕುರಿತು ಪಠ್ಯದಲ್ಲಿ ಅಳವಡಿಕೆ ಮಾಡಿದರೆ, ಯುವಕರಲ್ಲಿ ಇನ್ನೂ ಹೆಚ್ಚಿನ ದೇಶಪ್ರೇಮ ಬಿತ್ತಲು ಸಾಧ್ಯವಾಗಲಿದೆ ಎಂದರು.
ಸಂಜೀವ ಪಾಟೀಲ, ಉದಯ ಯಂಡಿಗೇರಿ, ಎಸ್​.ಬಿ. ಗುತ್ತಲ, ಇತರರು ಇದ್ದರು.