ಜಿಲ್ಲೆ

ಹಿಂದಿ ಭಾಷೆ ಏರಿಕೆ ಖಂಡಿಸಿ ಕರವೇ ಪ್ರತಿಭಟನೆ

ಮೈಸೂರು: ಕೇಂದ್ರ ಸರ್ಕಾರದ ಹಿಂದಿ ಭಾಷೆ ಏರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದ ಗಾಂಧಿ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ದೇಶದ ಎಲ್ಲ ಭಾಷೆಗಳನ್ನು ಸಮನಾಗಿ ಕಾಣಬೇಕು. ಆದರೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ಮೇಲೆ ಹಿಂದಿ ಏರಿಕೆ ಮಾಡಲು ಮುಂದಾಗಿದೆ. ಹಾಗಾಗಿ ಹಿಂದಿ ದಿವಸ ವಿರುದ್ಧ ಹೋರಾಟ ಮಾಡಲಾಗುವುದು ಎಂದು ದೂರಿದರು.
ದೇಶದ ಎಲ್ಲ ಭಾಷಿಕ ಸಮುದಾಯಗಳಿಗೂ ತಮ್ಮ ವೈವಿಧ್ಯತೆ ಉಳಿಸಿಕೊಂಡೇ ಒಂದಾಗಿ ಉಳಿಯಲು ಸಹಕರಿಸಿದ್ದರು. ಇಂಥ ವೈವಿಧ್ಯತೆಯ ನೆಲದಲ್ಲಿ ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಬಲವಂತವಾಗಿ ಎಲ್ಲರ ಮೇಲೂ ಹೇರುವುದು ಕ್ರೌರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯ ದಾದಾಗಿರಿ ನಡೆದಾಗಲೆಲ್ಲ ಜನರು ಸಿಡಿದೆದ್ದು ಪ್ರತಿಭಟಿಸಿದ್ದಾರೆ. ಇನ್ನಾವುದೋ ಅಪರಿಚಿತ ಭಾಷೆಯನ್ನು ಬಳಸಬೇಕೆಂದು ಫರ್ಮಾನು ಹೊರಡಿಸಿದರೆ ಆ ಭಾಷಾ ಸಮುದಾಯ ಬಂಡಾಯವೇಳುತ್ತದೆ ಎಂದು ಎಚ್ಚರಿಸಿದರು.
ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳೂ ರಾಷ್ಟ್ರಭಾಷೆಗಳೇ ಆಗಿವೆ. ಈ ಪರಿಚ್ಛೇದದಲ್ಲಿ ಒಳಗೊಳ್ಳದ ನೂರಾರು ಜೀವಂತ ಭಾಷೆಗಳೂ ನಮ್ಮ ನಡುವೆ ಇವೆ. ಈ ಎಲ್ಲ ಭಾಷೆಗಳು ಉಳಿದು, ಬೆಳೆಯುವ ಹಕ್ಕನ್ನೂ ಒಳಗೊಂಡಿವೆ ಎಂದರು.
ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡುವ ಪ್ರಸ್ತಾಪವನ್ನು ಸಂವಿಧಾನ ಕರಡು ರಚನೆಯ ಸಂದರ್ಭದಲ್ಲೇ ತಿರಸ್ಕರಿಸಲಾಗಿದೆ. ಹಿಂದಿಯೂ ಕನ್ನಡದ ಹಾಗೆಯೇ ಒಂದು ಭಾಷೆಯಾಗಿದ್ದು, ಅದಕ್ಕೆ ಯಾವ ಹೆಚ್ಚುಗಾರಿಕೆಯೂ ಇಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆ ಮಾಡಬಾರದು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಕೂಡಲೇ ಸಂವಿಧಾನಕ್ಕೆ ತಿದ್ದುಪಡಿ ತಂದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ಎಲ್ಲ 22 ಭಾಷೆಗಳನ್ನೂ ಅಧಿಕೃತ, ಆಡಳಿತ ಭಾಷೆಗಳನ್ನಾಗಿ ಮಾಡಿ ದೇಶದ ಬಹುತ್ವ ಕಾಪಾಡಬೇಕು. ಹಿಂದಿಗೆ ವಿಶೇಷ ಮನ್ನಣೆ ನೀಡುವ ಸಂವಿಧಾನದ 343ರಿಂದ 351ನೇ ವಿಧಿಗಳನ್ನು ರದ್ದುಪಡಿಸಬೇಕು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕೇಂದ್ರ ಸರ್ಕಾರಿ ಇಲಾಖೆಗಳು, ಉದ್ಯಮಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರ ಜಾರಿಗೆ ಬರಬೇಕಾಗಿ ನಮ್ಮ ಶಾಲಾ ಪಠ್ಯಕ್ರಮಗಳಿಂದ ಹಿಂದಿ ಕಡ್ಡಾಯ ಕಲಿಕೆ ಕೊನೆಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್‌ಕುಮಾರ್, ನಗರಾಧ್ಯಕ್ಷ ಲೋಕೇಶ್‌ಕುಮಾರ್, ಯುವ ಘಟಕದ ಅಧ್ಯಕ್ಷ ಹೇಮಂತ್‌ಗೌಡ, ಮುಖಂಡರಾದ ಅಸ್ಲಾಂ, ಸುನಾದ್ ಪ್ರಸಾದ್, ಮಾದೇಶ್, ಮದ್ವೇಶ್, ಕಾಶೀನಾಥ್, ಪುಟ್ಟ, ಬಾಲರಾಜ್, ಶ್ರೀನಿವಾಸ್, ಶಿವರಾಜು ಇತರರು ಇದ್ದರು.