ಜಿಲ್ಲೆ

ಅಂಗಡಿಗಳಲ್ಲಿ ಕನ್ನಡ ನಾಮಫಲಕ ಅಳವಡಿಸಲು ಆಗ್ರಹ: ಕರವೇ ಕಾರ್ಯಕರ್ತರಿಂದ ಜನಜಾಗೃತಿ ಆಂದೋಲನ

ಕೆ.ಎನ್.ರಾಘವೇಂದ್ರ

ಮಂಡ್ಯ: ವಾಣಿಜ್ಯ ಕಟ್ಟಡ ಮತ್ತು ಅಂಗಡಿಗಳಲ್ಲಿ ಕನ್ನಡ ನಾಮಫಲಕ ಅಳವಡಿಸಲು ಸಂಬಂಧಪಟ್ಟ ಮಾಲೀಕರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಜನಜಾಗೃತಿ ಆಂದೋಲನ ನಡೆಸಿದರು.

ವಿವಿಧ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಬೆಂಗಳೂರಿನಲ್ಲಿ ವಾಣಿಜ್ಯ ಕಟ್ಟಡ, ಅಂಗಡಿಗಳಲ್ಲಿ ಕನ್ನಡ ನಾಮಫಲಕ ಅಭಿಯಾನ ಕೈಗೊಳ್ಳಲಾಗಿತ್ತು. ನಮ್ಮ ಆಗ್ರಹಕ್ಕೆ ಮಣಿದ ರಾಜ್ಯ ಸರ್ಕಾರ ಫೆ.28ರೊಳಗೆ ರಾಜ್ಯದ ವಾಣಿಜ್ಯ ಕಟ್ಟಡ, ಅಂಗಡಿಗಳಲ್ಲಿ ಕನ್ನಡ ನಾಮಫಲಕಗಳನ್ನು ಶೇ.60ರಷ್ಟು ಇರುವಂತೆ ಆದೇಶ ಮಾಡಿತ್ತು. ಆದರೆ, ಮಾಲೀಕರು ಕನ್ನಡ ನಾಮಫಲಕ ಅಳವಡಿಸಲು ನಿರಾಸಕ್ತಿ ತೋರಿದ್ದರಿಂದ ಮತ್ತೆ ಎರಡು ವಾರಗಳ ಗಡುವನ್ನು ಸರ್ಕಾರ ವಿಸ್ತರಣೆ ಮಾಡಿದೆ ಎಂದು ಹೇಳಿದರು.

ಕನ್ನಡ ನಾಮಫಲಕ ಅಳವಡಿಸಲು ನಿರಾಸಕ್ತಿ ಮಾಡಿರುವ ವಾಣಿಜ್ಯ ಕಟ್ಟಡಗಳು, ಅಂಗಡಿ ಮಾಲೀಕರಿಗೆ ಮನವೊಲಿಸಲು ಮಂಡ್ಯ ನಗರ ವ್ಯಾಪ್ತಿಯಲ್ಲಿ ಕನ್ನಡ ನಾಮಫಲಕ ಅಭಿಯಾನವನ್ನು ಹಮ್ಮಿಕೊಂಡಿದ್ದು, ತಾವು ಸಕಾರಾತ್ಮಕವಾಗಿ ಪರಿಗಣಿಸಿ ಜಿಲ್ಲಾ ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳು, ಅಂಗಡಿ ಮಾಲೀಕರಿಗೆ ಕನ್ನಡ ನಾಮಫಲಕ ಅಳವಡಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

ಕರವೇ ರಾಜ್ಯ ಉಪಾಧ್ಯಕ್ಷ ಮಾ.ಸೋ.ಚಿದಂಬರ್, ಜಿಲ್ಲಾಧ್ಯಕ್ಷ ಡಿ.ಎಸ್.ವೇಣು, ಖಜಾಂಚಿ ಕಾಂತರಾಜು, ತಾಲೂಕು ಅಧ್ಯಕ್ಷ ಅಶೋಕ್, ಪಾಂಡವಪುರ ಅಧ್ಯಕ್ಷ ಗಜೇಂದ್ರ, ಮದ್ದೂರು ತಾಲೂಕು ಅಧ್ಯಕ್ಷ ಎಸ್.ಅಶೋಕ್, ಮುಖಂಡರಾದ ಎಂ.ಸಿ.ಲಿಂಗಯ್ಯ, ಕೆ.ಟಿ.ಶಂಕರೇಗೌಡ ಇತರರಿದ್ದರು.