ಹೊಳೆನರಸೀಪುರ: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅನ್ಯ ಭಾಷಿಗರ ದಬ್ಬಾಳಿಕೆಯಿಂದ ಕನ್ನಡ ನಾಡು-ನುಡಿ, ಸಂಸ್ಕೃತಿ ರಕ್ಷಿಸಲು ಆರಂಭ ಗೊಂಡ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಇಂದು ರಾಜ್ಯದ ಉದ್ದಗಲಕ್ಕೂ ಪಸರಿಸಿದ್ದು, ತನ್ನದೇ ಆದ ಶಕ್ತಿ ಹೊಂದಿದೆ ಎಂದು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮನುಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಹೇಮಾವತಿ ಪ್ರವಾಸಿ ಮಂದಿರದಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಯೋಜಿಸಿದ್ದ ಸಂಘಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕರವೇ ಯಾವುದೇ ಜಾತಿ, ಧರ್ಮಕ್ಕೆ ಅಂಟಿಕೊಂಡು ಬಂದಿಲ್ಲ. ನಾರಾಯಣಗೌಡರು ಕಟ್ಟಿದ ನಮ್ಮ ಕರವೇ ನಾಡು, ನುಡಿ, ಭಾಷೆಯ ಉಳಿವಿಗಾಗಿ ಆರಂಭಗೊಂಡಿದ್ದು, ನಾಡು ನುಡಿ, ಸಂಸ್ಕೃತಿ ರಕ್ಷಣೆ ಜತೆಗೆ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಯಶಸ್ಸು ಕಂಡಿದೆ ಎಂದರು.
ಪ್ರಸ್ತುತ ತಾಲೂಕು ಅಧ್ಯಕ್ಷ ಓಹಿಲೇಶ್ ಅವರು ಕರವೇಯನ್ನು ಹೋಬಳಿ ಮಟ್ಟದಲ್ಲಿ ಸಂಘಟನೆ ಮಾಡಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟು ಇದೀಗ ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡಲು ಮುಂದಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೆ.2 ರಂದು ಹಾಸನ ಜಿಲ್ಲಾ ಕೇಂದ್ರದಲ್ಲಿ ರಾಜ್ಯಾಧ್ಯಕ್ಷ ಕರವೇ ನಾರಾಯಣಗೌಡ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸದಸ್ಯರ ಸಭೆ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಕರವೇ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಕರವೇ ಸಂಘಟನೆಯ ಕಾರ್ಯದರ್ಶಿ ಕೆರಗೋಡು ಮಹೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನೂರಾರು ಕರವೇ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಸೀತಾರಾಮ್, ತಾಲೂಕು ಕರವೇ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷ ರಂಗಸ್ವಾಮಿ, ಹಳ್ಳಿಮೈಸೂರು ಹೋಬಳಿ ಅಧ್ಯಕ್ಷ ಮಲ್ಲಿಕಾರ್ಜುನ್, ಕಸಬಾ ಅಧ್ಯಕ್ಷ ಧರ್ಮರಾಜ್, ದಯಾನಂದ್, ರೈತ ಘಟಕದ ಅಧ್ಯಕ್ಷ ಕುಮಾರ್, ತಾಲೂಕು ರೈತ ಘಟಕದ ಅಧ್ಯಕ್ಷ ಭರತ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ನೂರಾರು ಕಾರ್ಯಕರ್ತರು ಇದ್ದರು.