ಜಿಲ್ಲೆ

ವಿವಿ ಮುಚ್ಚದಿರಲು ಆಗ್ರಹಿಸಿ ಕರವೇ ಪ್ರತಿಭಟನೆ

ವೀರೇಶ ಸೌದ್ರಿ

ಹಿರೇಕೆರೂರ: ಸರ್ಕಾರ ಹಾವೇರಿ ವಿಶ್ವ ವಿದ್ಯಾಲಯ ಮುಚ್ಚುವ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿ ತಾಲೂಕು ಕರವೇ ವತಿಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ಹಾವೇರಿ ವಿವಿ ಸೇರಿ 9 ವಿವಿಗಳನ್ನು ಮುಚ್ಚಲು ಸರ್ಕಾರ ಮುಂದಾಗಿರುವುದು ಆತಂಕ ಉಂಟು ಮಾಡಿದೆ. ರಾಜ್ಯ ಸರ್ಕಾರದ ನಡೆಯಿಂದಾಗಿ ಬಡ, ಮಧ್ಯಮ ವರ್ಗದ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿತರಾಗುತ್ತಾರೆ. ವಿವಿಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸಬೇಕಿತ್ತು. ಆದರೆ, ಸೌಕರ್ಯ ಒದಗಿಸದಿದ್ದರೂ ಹಲವು ಪ್ರಮುಖ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ, ಅಗತ್ಯವಿರುವ ಉನ್ನತ ಶಿಕ್ಷಣ ಪಡೆಯಲು ವಿವಿಧ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ವಿ.ವಿ. ಮುನ್ನಡೆಯುತ್ತಿದೆ. ಈಗಾಗಲೇ ಈ ವಿವಿಯಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳು, ನೂರಾರು ಬೋಧಕ ಮತ್ತು ಬೋಧಕೇತರ ವರ್ಗ ಮತ್ತು ಈ ವಿ.ವಿಗಳಿಗೆ ಸೇರ್ಪಡೆಯಾಗಿರುವ 42 ಪದವಿ ಕಾಲೇಜುಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಕೇವಲ ಲಾಭದ ದೃಷ್ಟಿಯಲ್ಲಿ ಪರಿಗಣಿಸದೆ, ಮಾನವ ಸಂಪನ್ಮೂಲ ಅಭಿವೃದ್ಧಿಯ ದೃಷ್ಟಿಯಿಂದ ಪರಿಗಣಿಸಿ, ಹಾವೇರಿ ವಿಶ್ವವಿದ್ಯಾಲಯಕ್ಕೆ ಆಗತ್ಯ ಅನುದಾನ ಬಿಡುಗಡೆಮಾಡಿ ವಿ.ವಿ ಯನ್ನು ಉಳಿಸಿ, ಬೆಳೆಸಲು ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಎಚ್. ಪ್ರಭಾಕರಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ಕರವೇ ಪದಾಧಿಕಾರಿಗಳಾದ ಕರಿಬಸಯ್ಯ ಬಸರೀಹಳ್ಳಿಮಠ, ಜಯಕುಮಾರ ಉಪ್ಪಾರ, ಭರಮಪ್ಪ ಹರಿಜನ, ಟಿಪ್ಪುಸುಲ್ತಾನ್ ಮಕಾಂದಾರ ಹಾಗೂ ಕಾರ್ಯಕರ್ತರು ಇದ್ದರು.