ಜಿಲ್ಲೆ

ಹಿಂದಿ ದಿವಸ್ ಆಚರಣೆಗೆ ಆಕ್ರೋಶ: ನಗರದಲ್ಲಿ ಕರವೇ ಪ್ರತಿಭಟನೆ

ಮಂಡ್ಯ: ಹಿಂದಿ ದಿವಸ್ ಆಚರಣೆ ವಿರೋಧಿಸಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡ ಪರ ಸಂಘಟನೆಗಳ ಒಕ್ಕೂಟ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಂಚೆ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯೆ, ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಖಂಡಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಮಾತನಾಡಿ, ಕೇಂದ್ರ ಸರ್ಕಾರ ಪ್ರತಿ ವರ್ಷ ಜ.10ರಂದು ವಿಶ್ವ ಹಿಂದಿ ದಿವಸ್ ಆಚರಣೆ ಮಾಡುತ್ತಿರುವುದು ಕನ್ನಡಿಗರಿಗೆ ಘಾಸಿ ತಂದಿದೆ. ಭಾರತ ಸರ್ಕಾರ ವ್ಯಯಿಸುವ ಪ್ರತಿ ರೂಪಾಯಿಯಲ್ಲೂ ಕನ್ನಡಿಗರ ಪಾಲಿದೆ. ಇಂತಹ ವ್ಯವಸ್ಥೆಯಲ್ಲಿ ಹಿಂದಿಗೆ ಮಾತ್ರ ಸಾವಿರಾರೂ ಕೋಟಿ ರೂ. ಖರ್ಚು ಮಾಡುತ್ತಿರುವುದು ತಪ್ಪು. ಆದ್ದರಿಂದ ಹಿಂದಿ ದಿವಸ್ ಆಚರಣೆಯನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿಯೂ ಉನ್ನತ ಹುದ್ದೆಯಿಂದ ಡಿ ದರ್ಜೆವರೆಗೆ ಕನ್ನಡಿಗರನ್ನೇ ನೇಮಿಸಬೇಕು. ಅಂಚೆ ಕಚೇರಿ ಹಾಗೂ ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿಯೇ ವ್ಯವಹಾರ ಇರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಟಿ.ಕೆ.ಸೋಮಶೇಖರ್, ಜೋಸೆಫ್, ಲಿಂಗರಾಜು, ಮುದ್ದೇಗೌಡ, ನಾಗರಾಜು, ವೆಂಕಟೇಶ್, ಶಿವಲಿಂಗಯ್ಯ, ಕಾಳಯ್ಯ ಇತರರಿದ್ದರು.