ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಕನ್ನಡದಲ್ಲಿ ವ್ಯವಹರಿಸದೆ ದರ್ಪ ಮೆರೆದ ನಗರದ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಕರವೇ (ಚಂದ್ರಶೇಖರ್ ಬಣ) ಕಾರ್ಯಕರ್ತರು ಬ್ಯಾಂಕ್ ಬಾಗಿಲಲ್ಲೇ ಕುಳಿತು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿ ರಸ್ತೆಯಲ್ಲಿರುವ ಬ್ಯಾಂಕ್ ಮ್ಯಾನೇಜರ್ ಸೌಮ್ಯ ಅವರು ಕನ್ನಡದಲ್ಲಿ ವ್ಯವಹರಿಸದೆ, ದರ್ಪ ಮೆರೆದು ಬ್ಯಾಂಕ್‌ನ ಗ್ರಾಹಕ ನೀಡಿದ ಚೆಕ್ ಅನ್ನು ಎಸೆದು ಕನಿಷ್ಠ ಗೌರವ ತೋರದೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕರವೇ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಕರ್ತರು ೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಚಂದ್ರಶೇಖರ್, ಖುದ್ದು ನಾನೇ ಎರಡು ಲಕ್ಷ ರೂ. ಚೆಕ್ ಡ್ರಾ ಮಾಡಿಕೊಳ್ಳಲು ಬ್ಯಾಂಕಿಗೆ ಬಂದೆ. ಬ್ಯಾಂಕ್ ಮ್ಯಾನೇಜರ್ ಅವರು ಈ ಬ್ರಾಂಚ್ ನಲ್ಲಿ ಹಣ ಇಲ್ಲ. ನೀವು ಮತ್ತೊಂದು ಶಾಖೆಗೆ ಹೋಗಿ ಡ್ರಾ ಮಾಡಿಕೊಳ್ಳಿ ಎಂದು ಉಡಾೆಯಿಂದ ಉತ್ತರಿಸಿದರು ಎಂದು ದೂರಿದರು.
ಬಳಿಕ ನಾನು ಕನ್ನಡದಲ್ಲಿ ಮಾತನಾಡಿ ಎಂದಾಗ ಚೆಕ್ ಎಸೆದು ಕನ್ನಡಕ್ಕೆ ಅಪಮಾನ ಮಾಡಿದ್ದಾರೆ. ಹೀಗಾಗಿ ಕರವೇ ಪದಾಧಿಕಾರಿಗಳು ಬ್ಯಾಂಕ್ ಸಿಬ್ಬಂದಿ ದುರಹಂಕಾರದ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದ ಅವರು, ಕನ್ನಡಕ್ಕೆ ಅವಮಾನಿಸಿದ ಮ್ಯಾನೇಜರ್ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಬ್ಯಾಂಕ್ ಮ್ಯಾನೇಜರ್ ಪ್ರತಿಭಟನಾನಿರತರ ಕ್ಷಮೆ ಕೇಳಿದ ಬಳಿಕ ಪ್ರತಿಭಟನೆ ಹಿಂಪಡೆದರು.