ಜಿಲ್ಲೆ

ಮಿಮ್ಸ್ ಅವ್ಯವಸ್ಥೆ ವಿರುದ್ಧ ಆಕ್ರೋಶ: ಕರವೇ ಕಾರ್ಯಕರ್ತರ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿನ ಅವ್ಯವಸ್ಥೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಮಿಮ್ಸ್ ಕಚೇರಿ ಎದುರು ಪ್ರತಿಭಟಿಸಿದ ಕಾರ್ಯಕರ್ತರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಿಮ್ಸ್ ಅವ್ಯವಸ್ಥೆಯಿಂದ ಕೂಡಿದ್ದು, ಸಾರ್ವಜನಿಕರಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಮಾತ್ರವಲ್ಲದೆ ಹೊರ ರೋಗಿಗಳು ಒಪಿಡಿ ಚೀಟಿ ಪಡೆಯಲು ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಚೀಟಿ ಪಡೆಯದಿದ್ದರೆ ವೈದ್ಯರು ಚಿಕಿತ್ಸೆ ಕೊಡುವುದಿಲ್ಲ ಎಂದು ದೂರಿದರು.

ಕ್ಯಾನ್ಸರ್ ಕೇಂದ್ರದಲ್ಲಿ ಚಿಕಿತ್ಸೆ ಸ್ಥಗಿತಗೊಂಡು ಹಲವು ವರ್ಷ ಕಳೆದಿದೆ. ಈ ಕೇಂದ್ರಕ್ಕೆ ಸಮರ್ಪಕ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಆದಾಗ್ಯೂ ಈ ಬಗ್ಗೆ ಗಮನಹರಿಸಿಲ್ಲ. ಇದಲ್ಲದೆ ಹಲವು ವರ್ಷದಿಂದ ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಯದೇ ಹಳಬರನ್ನೇ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಸೂಪರ್‌ವೈಸರ್‌ಗಳು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಮಿಮ್ಸ್‌ನಲ್ಲಿ ಔಷಧ ಲಭ್ಯವಿದ್ದರೂ ಹೊರಗೆ ತೆಗೆದುಕೊಳ್ಳುವಂತೆ ಕಳುಹಿಸುವ ಪರಿಪಾಠವಿದೆ. ಈ ಬಗ್ಗೆ ಸಂಸ್ಥೆಯ ನಿರ್ದೇಶಕರು ಗಮನಹರಿಸಿ ಸಮಸ್ಯೆಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆಯುವ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಡಿ.ಅಶೋಕ್, ಸ್ವಾಮಿ, ಯೋಗೇಶ್, ಮಲ್ಲೇಶ್, ಗದ್ದೇಗೌಡ, ಸಾವಿತ್ರಮ್ಮ, ಸ್ವಾಮಿ, ಗೀತಾ, ನಾಗರಾಜು, ಮೋಹನ್, ಸವಿತಾ ಇತರರಿದ್ದರು.