ಮಂಗಳೂರು : ದ.ಕ.ಜಿಲ್ಲಾ ಮಟ್ಟದ ಕರಾವಳಿ ಉತ್ಸವವನ್ನು ಡಿ.21ರಿಂದ ಮಂಗಳೂರಿನಲ್ಲಿ ಆಯೋಜಿಸಲು ಸೋಮವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಡಿ.21ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಜಿಲ್ಲೆಯ ಸಾಂಸ್ಕೃತಿಕ
ವೈಭವ ಪ್ರದರ್ಶಿಸಲಾಗುವುದು. ವಿವಿಧ ಅಕಾಡೆಮಿಗಳೊಂದಿಗೆ ಸೇರಿ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಡಿ.28 ಮತ್ತು 29ರಂದು ಪಣಂಬೂರು ಮತ್ತು ತಣ್ಣೀರುಬಾವಿ ಬೀಚ್‌ನಲ್ಲಿ ಬೀಚ್ ಉತ್ಸವ ನಡೆಯಲಿದೆ. ಜ.4 ಮತ್ತು 5ರಂದು ಕದ್ರಿ ಪಾರ್ಕ್‌ನಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿ, ಯುವ ಸಮೂಹದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಯುವ ಉತ್ಸವ
ನಡೆಯಲಿದೆ. ಜ.17 ಮತ್ತು 18ರಂದು ಆಕರ್ಷಕ ಗಾಳಿಪಟ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ. ವೈವಿಧ್ಯಮಯ ತಿಂಡಿ-ತಿನಿಸುಗಳ ಆಹಾರ ಮೇಳವನ್ನು ಕರಾವಳಿ ಉತ್ಸವ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನದಿ ಉತ್ಸವ ಕಾರ್ಯಕ್ರಮವನ್ನು ಹರೇಕಳದಲ್ಲಿ ಏರ್ಪಡಿಸಲಾಗುವುದು. ಕರಾವಳಿ ಉತ್ಸವ ಯಶಸ್ವಿಗೊಳಿಸಲು ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದೆ . ಈ ಬಾರಿ ಕರಾವಳಿ ಉತ್ಸವದಲ್ಲಿ ಹಿಂದಿಗಿಂತಲೂ ವಿಭಿನ್ನವಾಗಿ ಜನಾಕರ್ಷಣೆಯ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ವೃತ್ತಿಪರ ಕಲಾಸಾಧಕರನ್ನು ಒಳಗೊಂಡ ಕಾರ್ಯಕ್ರಮದ ರೂಪುರೇಷೆ ಮಾಡಲಾಗುವುದು ಎಂದು ಅವರು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ., ಡಿಸಿಪಿ ಸಿದ್ದಾರ್ಥ್ ಗೋಯಲ್, ಹೆಚ್ಚುವರಿ ಪೊಲೀಸು ವರಿಷ್ಠಾಧಿಕಾರಿ ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್, ಮುಡಾ ಆಯುಕ್ತೆ ನೂರ್ ಜಹಾರ ಖಾನಂ ಉಪಸ್ಥಿತರಿದ್ದರು.