ಜಿಲ್ಲೆ

ಸಂಸ್ಕೃತಿ ಪರಂಪರೆ ಎತ್ತಿ ಹಿಡಿದ ಕರಾವಳಿ ಜನರು,  ಮೂರು ದಿನದ ಉತ್ಸವ ಸಮಾರೋಪದಲ್ಲಿ ಮಾಜಿ ಸಿಎಂ ಶೆಟ್ಟರ್ ಅಭಿಮತ

ಹುಬ್ಬಳ್ಳಿ: ದೇಶದ ಸಂಸ್ಕೃತಿ ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ ಕರಾವಳಿ ಜನರು ಮುಂಚೂಣಿಯಲ್ಲಿದ್ದಾರೆ, ಇವರು ತಮ್ಮ ಕಲೆ, ಆಹಾರ ಪದ್ಧತಿಯನ್ನು ಜಗತ್ತಿನೆಲ್ಲೆಡೆ ಪಸರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.

ಇಲ್ಲಿಯ ಹೊಸ ಕೋರ್ಟ್ ಬಳಿ ಇರುವ ಕಲ್ಲೂರ ಲೇಔಟ್ ನಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಮತ್ತು ಇನ್ನರವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಕರಾವಳಿ ಉತ್ಸವ ಸಮಾರೋಪದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಉಡುಪಿ, ಮಂಗಳೂರು ಕಡೆ ಪ್ರವಾಸ ಮಾಡಿದ ಜನರಿಗೆ ಕರಾವಳಿ ಜನ ಏನೆಂದು ಗೊತ್ತಾಗುತ್ತದೆ. ಅವರು ಅತ್ಯಂತ ಮೃದು ಸ್ವಭಾವದವರು. ಪ್ರಾಮಾಣಿಕತೆ, ಪರಿಶ್ರಮವೇ ಅವರ ಆಸ್ತಿ. ಅಷ್ಟೇ ಜಾಣರೂ ಹೌದು. ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ಫಲಿತಾಂಶ ನೋಡಿದಾಗ ಅವರ ವಿದ್ವತ್ತು ಗಮನಕ್ಕೆ ಬರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಡುಪಿ, ಮಂಗಳೂರು ಭಾಗದಲ್ಲಿ ಉತ್ತಮ ಶಿಕ್ಷಣವೂ ಸಿಗುತ್ತದೆ. ಹಾಗಾಗಿಯೇ ಇಲ್ಲಿನ ಅನೇಕರು ಶಿಕ್ಷಣಕ್ಕಾಗಿ ಅಲ್ಲಿಗೆ ಹೋಗುತ್ತಾರೆ. ಅನೇಕರು ರ್ಯಾಂಕ್ ಪಡೆದುಕೊಂಡು ಬರುತ್ತಾರೆ. ಬಂಟ ಸಮಾಜದ ಜನರು ಕರಾವಳಿ ಬಗ್ಗೆ ಅತ್ಯಂತ ದೊಡ್ಡ ಅಭಿಮಾನ ಇಟ್ಟುಕೊಂಡು ಎಲ್ಲ ಕಡೆ ಕಲೆ, ಸಂಸ್ಕೃತಿಯನ್ನು ಕೊಂಡೊಯ್ಯುತ್ತಿದ್ದಾರೆ. ಇಂತಹ ಅನೇಕ ಉತ್ಸವಗಳಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ. ಹುಬ್ಬಳ್ಳಿ ಉತ್ಸವವೂ ಅತ್ಯಂತ ಅಚ್ಚುಕಟ್ಟಾಗಿ ನಡೆದಿದೆ ಎಂದು ಶ್ಲಾಘಿಸಿದರು.

ಬಂಟರು ಹೋಟೆಲ್ ಉದ್ಯಮದ ಮೂಲಕ ದೇಶ ವಿದೇಶದಲ್ಲೂ ಹೆಸರು ಮಾಡಿದ್ದಾರೆ. ವಿಶ್ವದ ಎಲ್ಲ ಕಡೆ ಭಾರತೀಯ ಆಹಾರ ಪದ್ಧತಿ ಪಸರಿಸಿದ್ದಾರೆ. ಇತ್ತೀಚೆಗೆ ಮೂಡಿಬಂದ ಕಾಂತಾರ ಚಿತ್ರದ ಮೂಲಕ ಧಾರ್ಮಿಕ ನಂಬಿಕೆಯನ್ನು ಜನರಿಗೆ ತಿಳಿಸಿ ಉಳಿಸಿಕೊಂಡು ಹೋಗಲು ಕಾರಣವಾಗಿದ್ದಾರೆ. ಅವರಲ್ಲಿ ವೃತ್ತಿಪರತೆ ಕಂಡು ಬರುತ್ತದೆ. ಇತರರಿಗೆ ಮಾದರಿಯಾಗಿ ಕೆಲಸ ಮಾಡುತ್ತಾರೆ. ಹುಬ್ಬಳ್ಳಿ ಧಾರವಾಡ ಅವಳಿನಗರ ತಮ್ಮದೇ ಎಂಬಂತೆ ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೂ ಕೈಜೋಡಿಸಿದ್ದಾರೆ ಎಂದು ಹೇಳಿದರು.

ಹುಬ್ಬಳ್ಳಿ ಧಾರವಾಡ ಬಂಟರ ಸಂದ ಅಧ್ಯಕ್ಷ ವಿಜಯಾನಂದ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರಾವಳಿ ಉತ್ಸವ ನೋಡಿದರೆ ಕರ್ನಾಟಕದ ಕರಾವಳಿಯನ್ನೇ ಧರೆಗೆ ತಂದಂತೆ ಭಾಸವಾಗುತ್ತಿದೆ. ಕರಾವಳಿಯ ವಿಶೇಷ ವಾದ್ಯ ಚೆಂಡೆ, ಪಿಲಿ ನೃತ್ಯ, ತಿಂಡಿ ತಿನಿಸುಗಳು ಗಮನ ಸೆಳೆಯತ್ತವೆ. ಇದೆಲ್ಲವನ್ನೂ ಕರಾವಳಿಗೆ ಹೋಗಿ ನೋಡುವ ಬದಲು ಎಲ್ಲವನ್ನೂ ಇಲ್ಲಿಯೇ ಸೃಷ್ಟಿಸಲಾಗಿದೆ. ಇದರಿಂದ ಈ ಭಾಗದ ಎಲ್ಲ ಜನರಿಗೆ ಅನುಕೂಲವಾಗಿದೆ ಎಂದರು.

ಬಂಟ್ವಾಳದ ಶಾರದಾ ಕಲಾ ತಂಡ ಚೆಂಡೆ ಮೇಳ, ಪುತ್ತೂರಿನ ಪಿಲಿ ನೃತ್ಯ ತಂಡದ ಸದಸ್ಯರು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರನ್ನು ಸನ್ಮಾನಿಸಲಾಯಿತು.
ಕುದ್ರೋಳಿ ಗಣೇಶ ಅವರ ಜಾದೂ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು.

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ, ಕಾರ್ಯದರ್ಶಿ ಪ್ರವಿಣ ಬನ್ಸಾಲಿ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶಿಲ್ಪಾ ಶೆಟ್ಟಿ, ಕಾರ್ಯದರ್ಶಿ ಶೈಲಜಾ ಬಾಗಡೆ, ಇವೆಂಟ್ ಚೇರ್ಮನ್ ಡಾ. ನಾಗರಾಜ ನಾಯ್ಕ, ಶಶಿಮಂಗಲಾ ಐತಾಳ, ಬಂಟರ ಸಂಘದ ಮಾಜಿ ಅಧ್ಯಕ್ಷ, ಸಿಎ ಎಸ್.ಬಿ. ಶೆಟ್ಟಿ, ಅನಂತಪದ್ಮನಾಭ ಐತಾಳ, ಲಿಂಗರಾಜ ಪಾಟೀಲ, ನಾಗೇಶ ಕಲಬುರ್ಗಿ, ಮೋಹನ ಶೆಟ್ಟಿ, ವಿಶ್ವನಾಥ, ಇತರರು ಭಾಗವಹಿಸಿದ್ದರು.