ಜಿಲ್ಲೆ

ರಾಜಧಾನಿಯಲ್ಲಿ ಮೇಳೈಸಿದ ಕರಾವಳಿ ಸೊಗಡು; ಜೆ.ಪಿ.ನಗರದಲ್ಲಿ 'ನಮ್ಮ ಕರಾವಳಿ ಉತ್ಸವ'

Bengaluru - General - Rama Kishan K V

ಬೆಂಗಳೂರು: ಕರಾವಳಿಯ ಸಂಸತಿ, ಸೊಬಗು, ಕಲೆ, ಆಹಾರ ಪದ್ಧತಿಯನ್ನು ರಾಜಧಾನಿಯಲ್ಲಿ ಅನಾವರಣ ಮಾಡುವ "ನಮ್ಮ ಕರಾವಳಿ ಉತ್ಸವ' ಕಾರ್ಯಕ್ರಮ ಜೆ.ಪಿ.ನಗರದ ಆರ್​ಬಿಐ ಬಡಾವಣೆಯಲ್ಲಿರುವ ಬಿಬಿಎಂಪಿ ಆಟದ ಮೈದಾನದಲ್ಲಿ ಭಾನುವಾರ ನಡೆಯಿತು.

ಕರಾವಳಿಗರ ಒಕ್ಕೂಟ ಬೆಂಗಳೂರು ಆಯೋಜಿಸಿದ್ದ ಕರಾವಳಿ ಉತ್ಸವದಲ್ಲಿ ಕಡಲ ತೀರದ ಬದುಕು&ಭಾವ ಅನಾವರಣಗೊಂಡಿದೆ. ಭಾನುವಾರವಾದ್ದರಿಂದ ಸಾವಿರಾರು ಜನ ಆಗಮಿಸಿ, ಸಂಭ್ರಮಿಸಿದರು. ಅದರಲ್ಲೂ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಗಳು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು.

ಕರಾವಳಿ ಭಾಗದ ಪ್ರತಿಭೆಗಳಿಂದ ನೃತ್ಯ ವೈಭವ, ನಡೂರು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಶಿವದೂತ ಪಂಜುರ್ಲಿ ಯಕ್ಷಗಾನ, ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್​ ಪೂಜಾರಿ ತಂಡದಿಂದ "ನಗೆಬುಗ್ಗೆ', ಕರಾವಳಿ ಕಲಾ ವೈಭವ ಪ್ರದರ್ಶನ ಸೇರಿದಂತೆ ಬೆಳಗ್ಗಿನಿಂದಲೇ ವಿವಿಧ ಸಾಂಸತಿಕ ಕಾರ್ಯಕ್ರಮಗಳು ನಡೆದವು. ಕುಂದಗನ್ನಡದ ರಾಯಭಾರಿ ಮನು ಹಂದಾಡಿ ಅವರ "ನಗೆ ಹಬ್ಬ' ಆಗಮಿಸಿದ್ದವರನ್ನು ನಗೆಗಡಲಲ್ಲಿ ತೇಲಿಸಿತು.

ಆಹಾರ ಮೇಳದಲ್ಲಿ ಜನವೋ ಜನ!

ಕರಾವಳಿಯ ವಿವಿಧ ಆಹಾರಗಳ ರುಚಿ ಸವಿಯಲು ಬೆಳಗ್ಗಿನಿಂದಲೇ ಜನರು ಆಹಾರ ಮೇಳದಲ್ಲಿ ಮುಗಿಬಿದ್ದರು. 20ಕ್ಕೂ ಅಧಿಕ ಆಹಾರ ಮಳಿಗೆಗಳಿದ್ದವು. ಪ್ರತಿಯೊಂದು ಮಳಿಗೆಯಲ್ಲೂ ವಿಧವಿಧವಾದ ಕರಾವಳಿ ಖಾದ್ಯಗಳು ತಯಾರಾಗುತ್ತಿದ್ದವು. ಜನರು ತಮ್ಮಿಷ್ಟದ ತಿನಿಸುಗಳನ್ನು ಖರೀದಿಸಲು ಮುಗಿಬೀಳುತ್ತಿದ್ದರು. ಅದರಲ್ಲೂ ಮಾಂಸಾಹಾರಿ ಆಹಾರದ ಕೌಂಟರ್​ಗಳಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ಮೀನಿನ ವಿವಿಧ ಖಾದ್ಯಗಳನ್ನು ಸವಿಯಲು ಜನ ಮುಗಿಬೀಳುತ್ತಿದ್ದರು. ಫಿಶ್​ ್ರೆೃ, ಫಿಶ್​ ತವಾ ್ರೆೃ ರುಚಿ ಸವಿಯಲು ಹೆಚ್ಚಿನ ಜನರು ಮುಂದಾಗುತ್ತಿದ್ದರು. ಕೆಲವು ಮಂದಿ ಐಸ್​ಕ್ರೀಂ ಸವಿಯುತ್ತಾ ಬಿರುಬಿಸಿಲಿನ ದಣಿವು ನಿವಾರಿಸಿಕೊಳ್ಳುತ್ತಿದ್ದರು.

ರಂಜಿಸಿದ ಗ್ರಾಮೀಣ ಕ್ರೀಡೆ

ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಆಡಳಿತ ನಿರ್ದೇಶಕ ಡಾ.ವೈ.ನವೀನ್​ ಭಟ್​ ಹಾಗೂ ಉಪ ಪೊಲೀಸ್​ ಆಯುಕ್ತ ಅಬ್ದುಲ್​ ಅಹದ್​ ಕ್ರೀಡಾ ಗ್ರಾಮವನ್ನು ಉದ್ಘಾಟಿಸಿದರು. ಬಳಿಕ ಹಗ್ಗ-ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ, ರಂಗೋಲಿ ಬಿಡಿಸುವುದು, ಚಿತ್ರಕಲೆ ಸೇರಿದಂತೆ ಕರಾವಳಿ ಭಾಗದ ವಿವಿಧ ಗ್ರಾಮೀಣ ಕ್ರೀಡೆಗಳು ನಡೆದವು. ಬಂದಿದ್ದ ಜನರು ಅವುಗಳಲ್ಲಿ ಸಂಭ್ರಮದಿಂದಲೇ ಭಾಗವಹಿಸಿದರು.

ವಿದೇಶಿಗರೂ ಬಂದಿದ್ದರು...

ಕರಾವಳಿ ಉತ್ಸವಕ್ಕೆ ಆಗಮಿಸಿದ್ದ ವಿದೇಶಿಗ ಕೆಲ ಹೊತ್ತು ಸಾಂಸತಿಕ ಕಾರ್ಯಕ್ರಮ ವೀಸಿದರು. ಆಹಾರ ಮಳಿಗೆಗೆ ತೆರಳಿ ಮೀನಿನ ವಿವಿಧ ಖಾದ್ಯಗಳನ್ನು ಸವಿದರು. ಜತೆಗೆ ಕುತೂಹಲದಿಂದ ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿ, ಸಂಭ್ರಮಿಸಿದರು.

ಕರಾವಳಿ ಉತ್ಸವ ರಾಜ್ಯದ ಹೆಮ್ಮೆ

'ಕರಾವಳಿ ಉತ್ಸವ' ಕೇವಲ ಕರಾವಳಿ ಜಿಲ್ಲೆಗಳಿಗೆ ಮಾತ್ರ ಸಂಭ್ರಮವಲ್ಲ. ಇದು ರಾಜ್ಯದ ಹೆಮ್ಮೆ. ಕರಾವಳಿ ಎಂದಾಕ್ಷಣ ಸಂಸತಿ, ಪರಂಪರೆ ಮತ್ತು ಜನರ ಧಾರ್ಮಿಕ ಶ್ರದ್ಧೆ ನೆನಪಾಗುತ್ತದೆ. ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ, ಅಲ್ಲಿ ತಮ್ಮ ಸಂಸತಿಯನ್ನು ಧೈರ್ಯದಿಂದ ಬಿತ್ತುವ ಕೆಲಸ ಕರಾವಳಿಗರು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕರಾವಳಿಯ ಜನರು ಸ್ವಾಭಿಮಾನಕ್ಕೆ ಹೆಸರಾಗಿದ್ದಾರೆ. ಹೀಗಾಗಿ ನಮ್ಮ ತಂದೆಗೂ, ಅಲ್ಲಿನ ಜನರಿಗೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕರಾವಳಿ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಇಂದು ಬೆಂಗಳೂರು ನಗರ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಹೊಂದಲು ಕರಾವಳಿಗರು ಆರ್ಥಿಕವಾಗಿ ಶಕ್ತಿ ತುಂಬಿದ್ದಾರೆ ಎಂದರು.

ಕರಾವಳಿಯ ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡಿದರೆ, ದೇಶದಲ್ಲೇ ಅತಿ ಹೆಚ್ಚು ಪ್ರವಾಸಿಗರನ್ನು ಸ್ವಾಗತಿಸುವ ಶಕ್ತಿ ಹೊಂದಿದೆ. ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಕರಾವಳಿ ಜಿಲ್ಲೆಗಳಲ್ಲಿ ಇನ್ನೇನು ಮಾಡಬಹುದು ಎಂದು ಯೋಚಿಸುವ ಹಂತದಲ್ಲಿ ಇದ್ದೇವೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಮುಂದುವರಿಯಬೇಕಾದ ಹಲವು ಮಜಲುಗಳಿವೆ. ಈ ಹಂತದಲ್ಲಿ ಮತ್ತೆ ಜನರು ಕರಾವಳಿಗೆ ಬರಬೇಕು. ಊರಿನಲ್ಲೇ ಯುವಜನತೆ ದುಡಿಮೆ ಆರಂಭಿಸಿ, ಉದ್ಯೋಗದಾತರಾಗಬೇಕು.

- ಗುರುರಾಜ್​ ಗಂಟಿಹೊಳಿ, ಶಾಸಕ, ಬೈಂದೂರು ಕ್ಷೇತ್ರ