ಜಿಲ್ಲೆ

ಮಾನಸಿಕ ಸದೃಢತೆ, ಏಕಾಗ್ರತೆಗೆ ಕರಾಟೆ ಪೂರಕ

ಜಿ.ಹೆಚ್. ಧನ್ಯಕುಮಾರ್

ಜಯಪುರ: ಕರಾಟೆ ಕೇವಲ ಆತ್ಮರಕ್ಷಣೆಗೆ ಸೀಮಿತವಾಗದೆ ಏಕಾಗ್ರತೆ, ವ್ಯಕ್ತಿತ್ವ ವಿಕಸನ, ಮಾನಸಿಕ ಸದೃಢತೆ ಹಾಗೂ ನಾಯಕತ್ವ ಗುಣ ಬೆಳೆಸಲು ಸಹಕಾರಿಯಾಗುತ್ತದೆ ಎಂದು ಜಯಪುರ ಠಾಣೆ ಎಸ್‌ಐ ಅಂಬರೀಶ್ ಹೇಳಿದರು.

ಜಯಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಆಯೋಜಿಸಿದ್ದ ಉಚಿತ ಕರಾಟೆ ಹಾಗೂ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಹೆಚ್ಚಿನ ಮಾಹಿತಿ ಇರುವುದಿಲ್ಲ. ಈ ಭಾಗದ ವಿದ್ಯಾರ್ಥಿಗಳು ಬುದ್ಧಿವಂತರಾಗಿದ್ದರೂ ಸರ್ಕಾರಿ ಹುದ್ದೆ ಪಡೆಯುವ ಪ್ರಮಾಣ ಕಡಿಮೆ ಇದೆ. ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಗಳ ಬಗ್ಗೆ ಗಮನಹರಿಸಬೇಕು ಎಂದರು.

ಪಶು ವೈದ್ಯಾಧಿಕಾರಿ ಡಾ.ಮಣಿಕಾಂತ್ ಮಾತನಾಡಿ, ಸ್ಪಂದನ ಸಂಸ್ಥೆ ಕರಾಟೆ ಶಿಬಿರ ಆಯೋಜಿಸುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಸೇವೆ ಆರಂಭಿಸಿದೆ. ಯುವಕರಿಗೆ ಈ ಸಂಸ್ಥೆ ಮಾದರಿಯಾಗಿದೆ ಎಂದರು.

ಸ್ಪಂದನ ಸಂಸ್ಥೆ ಕಾರ್ಯದರ್ಶಿ ಅರ್ಪಿತ ಮಾತನಾಡಿ, ಇಂದಿನ ದಿನಗಳಲ್ಲಿ ಸಮಾಜದಲ್ಲಿ ಸಮಾಜಘಾತುಕ ಶಕ್ತಿಗಳ ಹಾವಳಿ ಹೆಚ್ಚಾಗಿದ್ದು, ಸಂಕಷ್ಟದ ಸಮಯದಲ್ಲಿ ಕರಾಟೆಯಂತಹ ಸಮರ ಕಲೆ ತಿಳಿದಿದ್ದರೆ ಆಯುಧವಿಲ್ಲದೆ ತಮ್ಮ ಮೇಲೆ ನಡೆಯುವ ದಾಳಿಯನ್ನು ತಡೆಯಬಹುದು ಎಂದರು.

ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಪದಕ ವಿತರಿಸಲಾಯಿತು. ಕರಾಟೆ ಶಿಕ್ಷಕ ಮಣಿಕಂಠ ಹಾಗೂ ಸಹ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್, ನೌಕರರ ಸಂಘದ ತಾಲೂಕು ಉಪಾಧ್ಯಕ್ಷ ಗುರುಸ್ವಾಮಿ, ಜಯಪುರ ಗ್ರಾಪಂ ಅಧ್ಯಕ್ಷ ಕರುಣಾಕರ, ಕರಾಟೆ ಶಿಕ್ಷಕ ಮಣಿ, ವಿಶ್ವನಾಥ್, ಧರ್ಮಸ್ಥಳ ಸಂಘದ ಜಯಪುರ ವಲಯದ ಮೇಲ್ವಿಚಾರಕ ಮನೋಹರ್, ಮುಖಂಡರಾದ ಕೀರ್ತಿರಾಜ್ ಗುಡ್ಡೇತೋಟ, ಕೌಳಿ ರಾಮು, ಎಚ್ ಎಮ್ ಸತೀಶ್, ಸುಶ್ಮಿತ ಮಕ್ಕಿಕೊಪ್ಪ, ಹರೀಶ್, ಮನೋಹರ್ ಇದ್ದರು.