ಹನಗೋಡು: ವಿದ್ಯಾರ್ಥಿಗಳಿಗೆ ಕರಾಟೆ ಒಂದು ಅದ್ಭುತ ಶಕ್ತಿಯಾಗಿದ್ದು, ಆರೋಗ್ಯದ ಸಮತೋಲನ ಮತ್ತು ದೇಹ ಸದೃಢಕ್ಕೆ ಕರಾಟೆ ಕಲೆ ಸಹಕಾರಿಯಾಗಿದೆ ಎಂದು ಮುಖ್ಯಶಿಕ್ಷಕ ಕುಮಾರಸ್ವಾಮಿ ತಿಳಿಸಿದರು.
ಹನಗೋಡು ಹೋಬಳಿಯ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಮಂಗಳವಾರ ಸ್ವರಕ್ಷಣ ಕೌಶಲ ತರಬೇತಿ(ಕರಾಟೆ)ಗೆ ಚಾಲನೆ ನೀಡಿ ಮಾತನಾಡಿ, ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳ ದೈಹಿಕ, ಸಾಮಾಜಿಕ ಹಾಗೂ ಮಾನಸಿಕ ಬೆಳವಣಿಗೆ ಅಭಿವೃದ್ಧಿಗೊಳಿಸಿ, ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಆಯೋಚಿತವಾಗಿರುವ ಸಾಕ್ಷರತಾ ಇಲಾಖೆಯ ಸಹಯೋಗದ ಕಾರ್ಯಕ್ರಮವನ್ನು ಎಲ್ಲ ವಿದ್ಯಾರ್ಥಿನಿಯರು ಸದುಪಯೋಗಪಡಿಸಿಕೊಂಡು ತಮ್ಮ ಸ್ವರಕ್ಷಣ ಕೌಶಲಗಳನ್ನು ಗಳಿಸಿಕೊಂಡು ಆತ್ಮವಿಶ್ವಾಸದಿಂದ ಉನ್ನತ ವಿದ್ಯಾಭ್ಯಾಸ ಮಾಡಬೇಕೆಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆ ಹಲವಾರು ರೀತಿಯ ದುಶ್ಚಟಗಳಿಗೆ ದಾಸರಾಗುತ್ತಿದ್ದು, ವಿದ್ಯಾರ್ಥಿಗಳು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿಯೇ ಆರೋಗ್ಯದ ಜಾಗೃತಿಯ ಜತೆಗೆ ಕರಾಟೆಯಂತಹ ಕ್ರೀಡಾ ಮನೋಭಾವವನ್ನು ಬೆಳೆಸಿಕೊಂಡರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಾದ್ಯವೆಂದರು.
ಕರಾಟೆ ಶಿಕ್ಷಕ ಸದಾನಂದ ಕರಾಟೆಯ ವಿವಿಧ ಆಯಾಮಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಪ್ರೀತಿ, ಪುನೀತ್ ಸೇರಿದಂತೆ ವಿದ್ಯಾರ್ಥಿನಿಯರು ಇದ್ದರು.